ಏಪ್ರಿಲ್ 23 ರಿಂದ ಲಾಕ್ ಡೌನ್ನಲ್ಲಿ ಕೊಂಚ ವಿನಾಯಿತಿ: ಏನೇನು ಇರಲಿದೆ? ಇಲ್ಲಿದೆ ವಿವರ
ಏಪ್ರಿಲ್ 23 ರಿಂದ ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಕೊಂಚ ಸಡಿಲಿಸಿ ಕೆಲವು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ಬೆಂಗಳೂರು: ಕೋವಿಡ್ ಮಹಾಮಾರಿಯ ನಿಯಂತ್ರಣಕ್ಕಾಗಿ ಸದ್ಯ ಎರಡನೇ ಹಂತದ ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿದೆ. ಈ ನಡುವೆ ಏಪ್ರಿಲ್ 23 ರಿಂದ ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಕೊಂಚ ಸಡಿಲಿಸಿ ಕೆಲವು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ಸ್ಥಳೀಯ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಕೆಲವೊಂದು ಅವಶ್ಯ ಚಟುವಟಿಕೆಗಳನ್ನು ಈ ಲಾಕ್ ಡೌನ್ ಸಂದರ್ಭದಲ್ಲಿ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ.
ರಾಜ್ಯ ಸರಕಾರವು ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆಗಳನ್ನು ಮಾಡಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಈ ಮಾರ್ಗಸೂಚಿ ಸೋಂಕು ಪ್ರಕರಣಗಳು ಅಧಿಕವಾಗಿರುವ ಕಂಟೈನ್ ಮೆಂಟ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ. ಇಂದು ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬರಲಿದೆ.
ಲಾರಿ ರಿಪೇರಿ ಅಂಗಡಿ, ಹೆದ್ದಾರಿ ಡಾಬಾಗಳು, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ ಸೇವೆಗಳು, ಪ್ಲಂಬರ್ಗಳು, ಬಡಗಿ, ಮೋಟರ್ ರಿಪೇರಿ, ಆಹಾರ ಸಂಸ್ಕರಣಾ ಘಟಕಗಳು, ಪ್ಯಾಕೇಜಿಂಗ್ ಘಟಕಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ರಸ್ತೆ, ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಷರತ್ತುಬದ್ಧ ಅನುಮತಿ ಇದೆ. ಅಗತ್ಯ ವಸ್ತುಗಳ ಆನ್ ಲೈನ್ ಡೆಲಿವರಿ ಮತ್ತು ಎ.ಪಿ.ಎಂ.ಸಿ. ಮಾರುಕಟ್ಟೆಗಳಲ್ಲಿ ವ್ಯವಹಾರಕ್ಕೆ ಅನುಮತಿಯನ್ನು ನೀಡಲಾಗಿದೆ.
ಮುಂಗಾರು ಪೂರ್ವದ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿರುವುದರಿಂದ ರಸಗೊಬ್ಬರ, ಬೀಜ ಹಾಗೂ ಔಷಧಿ ಮಾರಾಟಕ್ಕೆ ಅನುಮತಿಯನ್ನು ನೀಡಲಾಗಿದೆ.
ಮದ್ಯ ಮಾರಾಟ, ಬಸ್ ಸಂಚಾರ, ರೈಲು ಸಂಚಾರ, ಮೆಟ್ರೋ ಹಾಗೂ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ. ಆಟೋ, ಕ್ಯಾಬ್ ಗಳ ಓಡಾಟ ಹಾಗೂ ಚಿತ್ರಮಂದಿರಗಳ ತೆರೆಯುವಿಕೆಗೂ ಅನುಮತಿ ನೀಡಲಾಗಿಲ್ಲ. ಕೆ.ಎಸ್.ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಬಸ್ಸುಗಳು ರಸ್ತೆಗೆ ಇಳಿಯುವುದಿಲ್ಲ.
ಧಾರ್ಮಿಕ ಸಭೆ-ಸಮಾರಂಭಗಳು, ಜನಸಂದಣಿ ಸೇರಲು ನಿರ್ಬಂಧ ಮುಂದುವರಿಯಲಿದೆ. ಕೃಷಿ ಹಾಗೂ ಮೀನಗಾರಿಕಾ ವಲಯಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಹೊಟೇಲುಗಳಲ್ಲಿ ಕುಳಿತು ಆಹಾರ ಸೇವನೆಗೆ ಅವಕಾಶವಿಲ್ಲ. ಆಹಾರ ಪದಾರ್ಥಗಳ ಪಾರ್ಸೆಲ್ ಸೇವೆಗೆ ಮಾತ್ರವೇ ಸದ್ಯಕ್ಕೆ ಅನುಮತಿ ನೀಡಲಾಗಿದೆ. ಅಂತರ್ಜಿಲ್ಲಾ ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದೆ.