ಹಿಂದೂಗಳು ಯುಎಇಗೆ ಬರಬಾರದು ಎಂದು ನಾನು ಹೇಳಿದರೆ ಭಾರತೀಯರಿಗೆ ಹೇಗನಿಸಬಹುದು? ರಾಜಕುಮಾರಿ ಹಿಂದ್ ಅಲ್ ಖಾಸ್ಸಿಮಿ ಪ್ರಶ್ನೆ

ಭಾರತೀಯರು ನಮ್ಮನ್ನು ದ್ವೇಷಿಸಿದ್ದು ಹಿಂದೆಂದೂ ಕಾಣಲಿಲ್ಲ. ಈಗ ಇದು ಹೊಸದಾಗಿ ಆರಂಭಗೊಂಡಿದೆ ಎಂದು ಭಾರತೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಭಾರತೀಯರು ಮುಸ್ಲಿಮರನ್ನು ಅಥವಾ ಅರಬ್ ಜನರ ಮೇಲೆ ದಾಳಿ ಮಾಡುವುದನ್ನು ಹಿಂದೆಂದೂ ನಾನು ಕೇಳಿರಲಿಲ್ಲ. ಇದು ನಮಗೆ ತೀರಾ ಹೊಸತು. ಇದು ನಮಗೆ ಗೊತ್ತಿರುವ ಭಾರತೀಯತೆಯೆ ಅಲ್ಲ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಕುಮಾರಿ ಹಿಂದ್ ಅಲ್ ಖಾಸ್ಸಿಮಿ ಹೇಳಿದ್ದಾರೆ.

ಹಿಂದ್ ಅಲ್ ಖಾಸ್ಸಿಮಿ ಯುಎಇ ರಾಜಕುಟುಂಬದ ಸದಸ್ಯೆಯಾಗಿದ್ದು ಇತ್ತೀಚೆಗೆ ಭಾರತದ ಹಲವರು ಸೋಷಿಯಲ್ ಮೀಡಿಯಾದಲ್ಲಿ ಮುಸ್ಲಿಮರು ಮತ್ತು ಅರಜ್ ಪ್ರಜೆಗಳ ವಿರುದ್ಧ ದ್ವೇಷ, ನಿಂದನೆಯ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುತ್ತಿರುವುದನ್ನು ಖಂಡಿಸಿ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರತದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಭಾರತದ ಜೊತೆ ನಮ್ಮ ಸಂಬಂಧಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಭಾರತೀಯರು ನಮ್ಮನ್ನು ದ್ವೇಷಿಸಿದ್ದು ಹಿಂದೆಂದೂ ಕಾಣಲಿಲ್ಲ. ಈಗ ಇದು ಹೊಸದಾಗಿ ಆರಂಭಗೊಂಡಿದೆ ಎಂದು ಭಾರತೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುಎಇಗೆ ನಾವು ಯಾರನ್ನು ಬಿಟ್ಟುಕೊಳ್ಳಬೇಕು ಎಂಬ ಕುರಿತು ಭಾರತ ನಮಗೆ ಒತ್ತಾಯದ ಸನ್ನಿವೇಶಕ್ಕೆ ಒಡ್ಡುತ್ತಿದೆಯೆ ಎಂದು ಆಕೆ ಪ್ರಶ್ನಿಸಿದ್ದು ನಾವು ಭಾರತೀಯ ಮುಸ್ಲಿಮರು ಮತ್ತು ಕ್ರೈಸ್ತರನ್ನು ಮಾತ್ರ ಎಮಿರೇಟ್ಸ್‌ಗೆ ಉದ್ಯೋಗಕ್ಕೆ ಬರಲು ಅವಕಾಶ ನೀಡಬೇಕೆ ಎಂದು ಕೇಳಿದ್ದಾರೆ.

ಭಾರತದ ಹಿಂದೂಗಳು ಎಮಿರೇಟ್ಶ್‌ಗೆ ಬರುವುದು ಬೇಡ ಎಂದು ನಾನು ಸಾರ್ವಜನಿಕವಾಗಿ ಹೇಳಿದರೆ ಭಾರತೀಯರಿಗೆ ಹೇಗನಿಸಬಹುದು ಎಂದು ಹಿಂದ್ ಅಲ್ ಖಾಸ್ಸಿಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಮಗೆ ಭಾರತೀಯರೆಲ್ಲರೂ ಒಂದೇ. ಭಾರತೀಯರನ್ನು ನಾವು ಹಿಂದೂ, ಮುಸ್ಲಿಮ್, ಕ್ರೈಸ್ತರು ಎಂದು ವಿಂಗಡಿಸಿ ನೋಡುವುದಿಲ್ಲ, ನಮ್ಮನ್ನು ಹಾಗೆ ಬೆಳೆಸಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿ ವರ್ಷ ಭಾರತಕ್ಕೆ ಸುಮಾರು 14 ಬಿಲಿಯನ್ ಡಾಲರ್ ಹಣ ಯುಎಇ ಇಂದ ರವಾನೆಯಾಗುತ್ತದೆ. ಇದು ನಿಂತರೆ ಹೇಗಾಗಬಹುದು ಎಂದು ಯೋಚಿಸಿ ಎಂದು ರಾಜಕುಮಾರಿ ಸ್ಂದರ್ಶನದ ವೇಳೆ ಹೇಳಿದ್ದಾರೆ.

ಭಾರತದಲ್ಲಿ ಎಲ್ಲರೂ ಈ ರೀತಿ ಇಲ್ಲ ಮತ್ತು ಇವರು ಬಾರತದ ಎಲ್ಲರನ್ನೂ ಪ್ರ್ರತಿನಿಧಿಸುತ್ತಿಲ್ಲ ಎಂಬುದು ಗೊತ್ತಿದೆ. ಆದರೆ ಈ ರೀತಿಯ ಮುಸ್ಲಿಮ್ ಮತ್ತು ಅರಬ್ ದ್ವೇಷ ಭಾರತೀಯರಿಂದ ನಾವು ನಿರೀಕ್ಷಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಯುಎಇಯಲ್ಲಿ ಇರುವ ಹಲವಾರು ಹಿಂದೂಗಳು ಇತ್ತೀಚೆಗೆ ಅರಬ್ ಮತ್ತು ಮುಸ್ಲಿಮ್ ದ್ವೇಷದ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದಾರೆ. ಇಂತಹ ದ್ವೇಷಪೂರಿತ ಮಾತುಗಳನ್ನು ನಮ್ಮ ದೇಶ ಸಹಿಸುವುದಿಲ್ಲ. ಇಂಥವರ ವಿರುದ್ಧ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದು ಹಿಂದ್ ಅಲ್ ಖಾಸ್ಸಿಮಿ ಹೇಳಿದ್ದಾರೆ.

ಅರಬ್ ದೇಶಗಳಾದ್ಯಂತ ಇರುವ ಹಲವು ಹಿಂದೂಗಳು ಮುಸ್ಲಿಮ್ ಮತ್ತು ಅರಬ್ ಪ್ರಜೆಗಳ ಕುರಿತು ಅವಹೇಳನ ಮತ್ತು ಇಸ್ಲಾಮೊಫೋಬಿಯಾದ ಪೋಸ್ಟ್‌ಗಳನ್ನು ಹಾಕುತ್ತಿರುವುದರ ವಿರುದ್ಧ ಅರಬ್ ದೇಶಗಳಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದು ಭಾರತದ ಕೇಂದ್ರ ಸರ್ಕಾರಕ್ಕೆ ಭಾರಿ ಮುಜುಗರ ಉಂಟುಮಾಡುತ್ತಿದ್ದು ಯುಎಇಯಲ್ಲಿರುವ ಭಾರತದ ರಾಯಭಾರಿ ಪವನ್ ಕಪೂರ್ ಇಂತಹ ಅವಹೇಳನ, ನಿಂದನೆ ಮತ್ತು ಧಾರ್ಮಿಕ ತಾರತಮ್ಯ ಭಾರತದ ಕಾನೂನಿಗೆ ವಿರುದ್ಧವಾಗಿದೆ ಎಂದು ಯುಎಇಯಲ್ಲಿರುವ ಭಾರತೀಯರಿಗೆ ಬುದ್ದಿ ಹೇಳುವ ಪ್ರಸಂಗ ಬಂದೊದಗಿದೆ. ಸಂಸದ ತೇಜಸ್ವಿ ಸೂರ್ಯ ಕೆಲ ವರ್ಷಗಳ ಹಿಂದೆ ಅರಬ್ ಮಹಿಳೆಯರ ಕುರಿತು ಹಾಕಿದ್ದ ವಿವಾದಾತ್ಮಕ ಟ್ವೀಟ್ ಒಂದು ಇತ್ತೀಚೆಗೆ ಅರಬ್ ದೇಶಗಳಲ್ಲಿ ವೈರಲ್ ಆಗಿ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು.

Get real time updates directly on you device, subscribe now.