ಲಸಿಕೆ ಕಂಡುಹಿಡಿಯುವ ತನಕ ಕೊರೋನಾ ತಡೆಯುವುದು ಸಾಧ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಕಳವಳ
ಲಸಿಕೆ ಇಲ್ಲದೇ ಕೊರೋನಾ ಎದುರಿಸಬಲ್ಲ ಪ್ರತಿಬಂಧಕ ಶಕ್ತಿ ಜನರು ಹೊಂದುವಂತೆ ಮಾಡುವಲ್ಲಿ ಜಾಗತಿಕ ಸಮುದಾಯಕ್ಕೆ ಹಲವು ವರ್ಷಗಳೇ ತಗುಲಬಹುದು ಎಂಬುದನ್ನು ನಾವು ಗಮನಿಸಬೇಕಾದ ಅಗತ್ಯವಿದೆ
ಕರಾವಳಿ ಕರ್ನಾಟಕ ವರದಿ
ವೆಲ್ಲಿಂಗ್ಟನ್: ವಿಶ್ವವನ್ನೇ ತಲ್ಲಣಗೊಳ್ಳಿಸಿರುವ ಕೊರೊನಾ ವೈರಸ್(Covid-19) ಅದನ್ನು ನಿಯಂತ್ರಿಸಲು ಜಗತ್ತಿನಾದ್ಯಂತ ವಿವಿಧ ದೇಶಗಳು ಹೆಣಗುತ್ತಿದ್ದರೂ ಲಸಿಕೆ ಕಂಡುಹಿಡಿಯುವ ತನಕ ಅದನ್ನು ತಡೆಯುವುದೂ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಗಳು ಕಳವಳವ್ಯಕ್ತಪಡಿಸಿದ್ದಾರೆ. WHOದ ತುರ್ತು ಆರೋಗ್ಯ ಸೇವೆಗಳ ಮುಖ್ಯಸ್ಥ ಡಾ. ಮೈಕೆಲ್ ರ್ಯಾನ್ ಅವರು ಈ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಲಸಿಕೆ ಇಲ್ಲದೇ ಕೊರೋನಾ ಎದುರಿಸಬಲ್ಲ ಪ್ರತಿಬಂಧಕ ಶಕ್ತಿ ಜನರು ಹೊಂದುವಂತೆ ಮಾಡುವಲ್ಲಿ ಜಾಗತಿಕ ಸಮುದಾಯಕ್ಕೆ ಹಲವು ವರ್ಷಗಳೇ ತಗುಲಬಹುದು ಎಂಬುದನ್ನು ನಾವು ಗಮನಿಸಬೇಕಾದ ಅಗತ್ಯವಿದೆ ಎಂದು ಅವರು ನುಡಿದರು.
ಕೊರೋನಾ ವೈರಸ್ ಎಚ್.ಐ.ವಿಯಂತೆ ಮನುಕುಲವನ್ನು ಹಲವು ವರ್ಷ ಕಾಡುತ್ತಿರುವ ಸಾಧ್ಯತೆ ಬಗ್ಗೆ ಅವರು ಒತ್ತಿ ಹೇಳಿದ್ದಾರೆ. ಎಚ್.ಐ.ವಿಯಂಥ ರೋಗಗಳನ್ನು ಹೇಗೆ ನಿರ್ಮೂಲನ ಮಾಡಲು ಸಾಧ್ಯವಾಗಿಲ್ಲವೋ ಮತ್ತು ಅದನ್ನು ಹೇಗೆ ಪರಿಣಾಮಕಾರಿ ಚಿಕಿತ್ಸೆ ಮೂಲಕ ನಿಯಂತ್ರಿಸಲಾಗುತ್ತಿದೆಯೇ ಅಂತೆಯೇ ಕೊರೋನಾ ಕೂಡ ಎಂದು ಅಂದು ಅವರು ಹೇಳಿದ್ದಾರೆ.
ಕೊರೋನಾಗೆ ಲಸಿಕೆ ಕಂಡುಹಿಡಿದರೂ ಕೂಡ ಸಮರ್ಪಕ ಮಟ್ಟದಲ್ಲಿ ಅದನ್ನು ಉತ್ಪಾದಿಸುವುದು ಮತ್ತು ಜಗತ್ತಿನಾದ್ಯಂತ ಅದು ಸಿಗುವಂತೆ ಮಾಡುವುದು ಕೂಡ ದೊಡ್ಡ ಜವಾಬ್ದಾರಿಯ ಕೆಲಸ ಎಂದು ಅವರು ಹೇಳಿದ್ದಾರೆ.
ವಿಶ್ವಆರೋಗ್ಯ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥೆ ಮರಿಯಾ ವಾನ್ ಕೆರ್ಕೊವೆ ಕೊರೋನಾ ಬಗ್ಗೆ ಕೆಲವರಲ್ಲಿ ಹತಾಶೆಯ ಭಾವನೆ ಮೂಡಿರುವುದು ಗಮನಿಸಿದ್ದೇನೆ ಎಂದರು. ಆದರೆ ಹತಾಶರಾಗುವ ಅಗತ್ಯ ಏನೂ ಇಲ್ಲ. ಕೊರೋನಾವನ್ನು ನಿಯಂತ್ರಿಸುವುದು ಹೇಗೆಂಬುದು ನಾಗರಿಕರ ಕೈಯಲ್ಲೇ ಇದೆ ಎಂದರು.
ಜಗತ್ತಿನ ಕೆಲವು ದೇಶಗಳು ಕೊರೋನಾವನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಾಣುತ್ತಿರುವುದನ್ನು ನಾವು ಗಮನಿಸಬಹುದಾಗಿದೆ ಎಂದರು.
ವಿಶ್ವದಾದ್ಯಂತ 4.2ಮಿಲಿಯ ಜನ ಈಗಾಗಲೇ ಕೊರೋನಾ ಭಾಧಿತರಾಗಿದ್ದಾರೆ. 292,000ಜನ ಸಾವಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಹೇಳುತ್ತಿದ್ದರೂ ನಿಖರ ಸಂಖ್ಯೆ ಇನ್ನೂ ಹೆಚ್ಚು.
ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೋನಾ ತಡೆಯುವ ಕ್ರಮವಾಗಿ ಅವೈಜ್ನಾನಿಕ ಲಾಕ್ ಡೌನ್ ಪರಿಣಾಮ ಜನಜೀವನ ತತ್ತರಿಸಿ ಹೋಗಿದೆ. ಇದೀಗ ಕೊರೋನಾವನ್ನು ಲಸಿಕೆ ಕಂಡುಹಿಡಿಯದೇ ತಡೆಯುವುದು ಅಸಾಧ್ಯ ಎಂಬ ತಿಳುವಳಿಕೆ ಬಂದ ಬಳಿಕ ಹಲವು ದೇಶಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗಿದ್ದು, ಜನ ಸಾಮಾಜಿಕ ಅಂತರ ಕಾಪಾಡಿಕೊಂಡು ದೈನಂದಿನ ಜೀವನ ಸಾಗಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ.