ಮೆ.19: ರಾಜ್ಯದಲ್ಲಿ ಬಸ್, ರಿಕ್ಷಾ ಸಂಚಾರ ಆರಂಭ, ಭಾನುವಾರ ಕಂಪ್ಲೀಟ್ ಲಾಕ್ ಡೌನ್
ಬೀದಿ ಬದಿ ವ್ಯಾಪಾರಿಗಳು, ಸಲೂನ್, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲ ಅಂಗಡಿ ತೆರೆಯಲು ಅವಕಾಶ.
ಮೇ.31ರ ತನಕ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳದಿಂದ ರಾಜ್ಯ ಪ್ರವೇಶಿಸಲು ಅವಕಾಶವಿಲ್ಲ.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಮೇ.19ರಿಂದ ರೆಡ್ ಝೋನ್ ಮತ್ತು ಕಂಟೇನ್ಮೆಂಟ್ ಝೋನ್ ಹೊರತು ಪಡಿಸಿ ಉಳಿದೆಡೆ ಬಿಎಂಟಿಸಿ, ಕೆಎಸ್ಆರ್ ಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಬಸ್ ಸಂಚಾರ ಆರಂಭವಾಗಲಿದೆ. ಬಸ್ ನಲ್ಲಿ ಮುವತ್ತು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಬಸ್ ನಲ್ಲಿ ಸಂಚರಿಸುವವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಖಾಸಗಿ ಬಸ್ ಸಂಚಾರಕ್ಕೂ ಅನುಮತಿ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ.31ರ ತನಕ ಪ್ರತೀ ಭಾನುವಾರ ಇಡೀ ದಿನ ಸಂಪೂರ್ಣ ಲಾಕ್ಡೌನ್ ಇದ್ದು, ಜನರ ಓಡಾಟಕ್ಕೆ ಅವಕಾಶ ಇಲ್ಲ ಎಂದರು.
ಆಟೋ, ಟ್ಯಾಕ್ಸಿ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಆಟೋ ಮತ್ತು ಟ್ಯಾಕ್ಸಿಯಲ್ಲಿ ಚಾಲಕ ಸೇರಿ ಇಬ್ಬರು, ಮ್ಯಾಕ್ಸಿ ಕ್ಯಾಬ್ ನಲ್ಲಿ ಚಾಲಕ ಸೇರಿದಂತೆ ಮೂವರಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳ ರೈಲುಗಳನ್ನು ಹೊರತುಪಡಿಸಿ ರಾಜ್ಯದೊಳಗಿನ ರೈಲು ಸಂಚಾರಕ್ಕೆ ಅವಕಾಶವಿದೆ. ಬೆಂಗಳೂರು ಮೆಟ್ರೋ ಸಂಚಾರಕ್ಕೆ ಅವಕಾಶವಿಲ್ಲ.
ಮಾಲ್, ಸಿನೆಮಾ , ಹೊಟೇಲ್ ಹೊರತು ಪಡಿಸಿ ಬೀದಿ ಬದಿ ವ್ಯಾಪಾರಿಗಳು, ಸಲೂನ್, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಕ್ರೀಡಾ ಚಟುವಟಿಕೆ ಅವಕಾಶವಿದ್ದರೂ ಜಿಮ್ ತೆರೆಯುವಂತಿಲ್ಲ.
ಬೆಳಗ್ಗೆ 7 ರಿಂದ 9, ಸಾಯಂಕಾಲ 5 ರಿಂದ 7ಗಂಟೆಯವರೆಗೆ ಪಾರ್ಕ್ಗಳಲ್ಲಿ ಜನರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಮೇ.31ರ ತನಕ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳದಿಂದ ರಾಜ್ಯ ಪ್ರವೇಶಿಸಲು ಅವಕಾಶವಿಲ್ಲ.