ಬಾಂಬೆಯಿಂದ ಡಾನ್ ತರ ಫೋನ್ ಮಾಡಿದರೆ ಹೇಗೆ ಎಳೆದುತರಬೇಕೆಂದು ಗೊತ್ತಿದೆ: ಉಡುಪಿ ಡಿಸಿ ವಾರ್ನಿಂಗ್

ಡಿಸಿಗೆ, ಎಸಿಗೆ, ಎಸ್ಪಿಗೆ, ಎಂ.ಎಲ್.ಎ‌ಗಳಿಗೆ ಬೈದರೆ ಈ ಆಟ ನಡೆಯೋದಿಲ್ಲ.

ನಮಗೆ ಉಡುಪಿ ಜಿಲ್ಲೆಯ 13ಲಕ್ಷ ಜನರ ರಕ್ಷಣೆ ಬಹಳ ಮುಖ್ಯ. ಕ್ವಾರಂಟೈನ್‌ನಲ್ಲಿರುವ ಜನರಿಗೆ ಎಷ್ಟು ಸೌಲಭ್ಯ ಕೊಡಬೇಕು ಅದನ್ನು ಮಾಡುತ್ತಿದ್ದೇವೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: “ನಮಗೆ ಉಡುಪಿ ಜಿಲ್ಲೆಯ 13ಲಕ್ಷ ಜನರ ರಕ್ಷಣೆ ಬಹಳ ಮುಖ್ಯ. ಕ್ವಾರಂಟೈನ್‌ನಲ್ಲಿರುವ ಜನರಿಗೆ ಎಷ್ಟು ಸೌಲಭ್ಯ ಕೊಡಬೇಕು ಅದನ್ನು ಮಾಡುತ್ತಿದ್ದೇವೆ. ಆದರೆ ಒಂದಿಷ್ಟು ಜನ ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮದಲ್ಲಿ ಒಂದೇ ಒಂದು ಆಡಿಯೋ ಹಾಕಿದರೆ ಅಂಥವರನ್ನು ಬಿಡುವುದಿಲ್ಲ. ಬಾಂಬೆಯಿಂದ ಡಾನ್ ತರ ಫೋನ್ ಮಾಡಿದರೆ ಅವರನ್ನು ಹೇಗೆ ಎಳೆದುತರಬೇಕೆಂದು ಗೊತ್ತಿದೆ.

ಡಿಸಿಗೆ, ಎಸಿಗೆ, ಎಸ್ಪಿಗೆ, ಎಂ.ಎಲ್.ಎ‌ಗಳಿಗೆ ಬೈದರೆ ಈ ಆಟ ನಡೆಯೋದಿಲ್ಲ. ಅಂಥವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ದೂರುವುದು ಇಂದಿಗೆ ಕೊನೆಯಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ತಾ.ಪಂ ಸಭಾಂಗಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿಸಿ ಜಗದೀಶ್ ಮಾತನಾಡುತ್ತಿದ್ದರು.

ನಾವು ಯಾರಿಗಾಗಿ ಮೂರು ತಿಂಗಳಿಂದ ಊಟ, ನಿದ್ರೆ ಬಿಟ್ಟು ಕೆಲಸ ಮಾಡುತ್ತಿದ್ದೇವೆ ಎಂಬುದು ಅರಿವಾಗಬೇಕು. ನಾಳೆಯಿಂದ ಯಾರೇ ಆಗಲೀ ಸಾಮಾಜಿಕ ಮಾಧ್ಯಮದಲ್ಲಿ ಜಿಲ್ಲಾಧಿಕಾರಿ, ಎಸ್ಪಿ, ಎಸಿ, ಎಂ.ಎಲ್.ಎ, ಎಂ.ಪಿಗೆ ಬೈದರೆ ಜೈಲಿಗೆ ಹಾಕುತ್ತೇನೆ ಎಂದು ಜಿಲ್ಲಾಧಿಕಾರಿ ಜಗದೀಶ್ ಅವರು ಕಿಡಿಕಾರಿದ್ದಾರೆ. ಮಾಧ್ಯಮದವರು ಈ ಸಂದೇಶವನ್ನು ಜನರಿಗೆ ತಲುಪಿಸಿ ಎಂದಿದ್ದಾರೆ.

ಕ್ವಾರಂಟೈನ್ ಕೇಂದ್ರದಲ್ಲಿರುವ ಕೆಲವರಿಗೆ ನೀಡಿದ ಸೌಲಭ್ಯ ಕಡಿಮೆಯಾಗಿದೆ ಎಂಬ ಆಕ್ಷೇಪಗಳಿವೆ. ಆದರೆ ಅವರಿಗೆ ಅವರ ಮನೆಯಿಂದ ಬೇಕಾದ ಊಟ, ತಿಂಡಿ ಕೊಡೇವೆ ಎಂದು ಹೇಳಿದರೆ ಅದೆಲ್ಲ ಆಗೋದಿಲ್ಲ. ಯಾಕೆಂದರೆ ಅವರ ಮೂಲಕ ಕೊರೋನಾ ಮನೆ ತಲುಪುತ್ತದೆ. ಕ್ವಾರಂಟೈನ್ ಸೆಂಟರ್‌ನಿಂದ ಯಾರೂ ಮನೆಗೆ ಕೊರೋನಾ ಕೊಂಡುಹೋಗಬಾರದು ಎಂಬುದು ನಮ್ಮ ಉದ್ದೇಶ ಮೇಡಂ” ಎಂದು ಕುಂದಾಪುರ ತಾ.ಪಂ.ಸಭಾಂಗಣದಲ್ಲಿ ಸಂಸದೆ ಶೋಭಾ ಕಂರಂದ್ಲಾಜೆಯವರನ್ನು ಉದ್ದೇಶಿಸಿ ಡಿಸಿ ಜಗದೀಶ್ ತಾನು ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಜಿಲ್ಲಾಧಿಕಾರಿಯವರ ಟೀಕೆ ಮಾಡುವವರು, ಆಡೀಯೋ ಸಂದೇಶ ಮಾಡಿ ವಾಟ್ಸ್ಯಾಪ್‌ನಲ್ಲಿ ಹಾಕುವವರು, ಫೇಸ್‌ಬುಕ್ ಮೂಲಕ ವಿಡೀಯೋ ಮತ್ತಿತರ ಸಂದೇಶ ಹಾಕುವವರನ್ನು ‘ಕಿಡಿಗೇಡಿ’ಗಳು ಎಂದು ಡಿಸಿ ಜಗದೀಶ್ ಪದೇ ಪದೇ ಒತ್ತಿ ಹೇಳಿ ತನ್ನ ಆಕ್ರೋಶ ಹೊರಗೆಡಹಿದ್ದು, ನಾಳೆಯಿಂದ ಒಬ್ಬನೇ ಒಬ್ಬ ವ್ಯಕ್ತಿ ತನ್ನ ವಿರುದ್ಧ ಮಾತಾಡಿದರೂ ಅದನ್ನು ಸಹಿಸುವುದಿಲ್ಲ. ಅಂಥವರನ್ನು ಜೈಲಿಗೆ ಹಾಕುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಶಾಸಕ ಸುಕುಮಾರ ಶೆಟ್ಟಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Get real time updates directly on you device, subscribe now.