ಕುಂದಾಪುರ: ಹೋಮ್ ಕ್ವಾರಂಟೈನ್‌ಗೆ ತೆರಳಿದವರಿಗೆ ಕೋವಿಡ್ ಸೋಂಕು: ಕೆಲವೆಡೆ ಸೀಲ್ ಡೌನ್

ಗಂಟಲು ದ್ರವ ಪರೀಕ್ಷೆ ವರದಿ ಬರುವ ಮುನ್ನವೇ ಸರಕಾರಿ ಆದೇಶದಂತೆ ಮೇ.28ರಂದು ತಮ್ಮ ಮನೆಗೆ ಹೋಂ ಕ್ವಾರಂಟೈನ್‌ಗೆ ತೆರಳಿದ ಕೆಲವರಲ್ಲಿ ಕೋವಿಡ್ ಸೋಂಕು ಲಕ್ಷಣಗಳು ಪತ್ತೆಯಾದ ಹಿನ್ನೆಲೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಸರಕಾರಿ ಕ್ವಾರಂಟೈನ್ ಮುಗಿದ ಬಳಿಕ ಗಂಟಲು ದ್ರವ ಪರೀಕ್ಷೆ ವರದಿ ಬರುವ ಮುನ್ನವೇ ಸರಕಾರಿ ಆದೇಶದಂತೆ ಮೇ.28ರಂದು ತಮ್ಮ ಮನೆಗೆ ಹೋಂ ಕ್ವಾರಂಟೈನ್‌ಗೆ ತೆರಳಿದ ಕೆಲವರಲ್ಲಿ ಕೋವಿಡ್ ಸೋಂಕು ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತರನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ.28ರಂದು ಮನೆಗೆ ಬಂದವರ ಕೋವಿಡ್ ಪರೀಕ್ಷಾ ವರದಿ ಮರುದಿನ ಬಂದಿದ್ದು, ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಂಥವರ ಮನೆಗಳಿರುವ ಪ್ರದೇಶಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಕೋಡಿ, ಹಳ್ನಾಡು, ನೇರಳಕಟ್ಟೆ ಮುಂತಾದೆಡೆ ಎಸ್ಸೈ ಹರೀಶ್ ನಾಯ್ಕ್ ನೇತೃತ್ವದಲ್ಲಿ ಇನ್ನೂರು ಮೀ. ವ್ಯಾಪ್ತಿಯಲ್ಲಿ ಪೊಲೀಸ್ ಬ್ಯಾಂಡ್ ಕಟ್ಟಿ ಸಾರ್ವಜನಿಕ ಸಂಪರ್ಕ ನಿರ್ಬಂಧಿಸಲಾಗಿದೆ.

ಕೋಟತಟ್ಟು ಪಂಚಾಯತ್ ವ್ಯಾಪ್ತಿಯ ಬಾರಿಕೆರೆಯ ನೂರು ಮೀ. ವ್ಯಾಪ್ತಿಯ ಹನ್ನೆರಡು ಮನೆಗಳ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಮುಂಬೈಯಿಂದ ಬಾರಿಕೆರೆಗೆ ಬಂದ ಮಹಿಳೆಯೋರ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಈ ಪ್ರದೇಶದ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಮಹಾರಾಷ್ಟ್ರದಿಂದ ಅಮಾಸೆಬೈಲು ಪಂಚಾಯತ್ ವ್ಯಾಪಿಯ ವಂಡಾರು ಮಾರ್ವಿಗೆ ಬಂದ ಒಂದು ವರ್ಷದ ಮಗುವಿನಲ್ಲಿ ಕೊರೋನಾ ಸೋಂಕು ದೃಢವಾಗಿದೆ.

Get real time updates directly on you device, subscribe now.