ಭಟ್ಕಳ: ಜೂ.9ರಿಂದ ಮಸೀದಿಗಳಲ್ಲಿ ಪ್ರಾರ್ಥನೆ; ನಾವುಂದ: ಜೂನ್ 30ರವರೆಗೆ ಮಸೀದಿ ತೆರೆಯದು

ಭಟ್ಕಳದಲ್ಲಿ ಸುಮಾರು ನೂರೈವತ್ತಕ್ಕೂ ಅಧಿಕ ಮಸೀದಿಗಳು ಜೂ.9ರಿಂದ ಸಾಮೂಹಿಕ ಪ್ರಾರ್ಥನೆಗೆ ತೆರೆಯಲ್ಪಡಲಿವೆ.

ಕೊರೋನ ಉಡುಪಿ ಜಿಲ್ಲೆಯಲ್ಲಿ ಹೆಚ್ಚುತಿರುವುದರಿಂದ ಜೂನ್ 30 ರ ವರೆಗೆ ಮಸೀದಿ ತೆರೆಯದಿರಲು ನಾವುಂದದಲ್ಲಿ ಸರ್ವಾನುಮತದ ತೀರ್ಮಾನಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಭಟ್ಕಳ: ಇಲ್ಲಿನ ಸುಮಾರು ನೂರೈವತ್ತಕ್ಕೂ ಅಧಿಕ ಮಸೀದಿಗಳು ಜೂ.9ರಿಂದ ಸಾಮೂಹಿಕ ಪ್ರಾರ್ಥನೆಗೆ ತೆರೆಯಲ್ಪಡಲಿವೆ. ಜಮಾಅತುಲ್ ಮುಸ್ಲಿಮೀನ್ ಭಟ್ಕಳ, ಮರ್ಕಝಿ ಖಲಿಫಾ ಜಮಾತ್ ಖಾಝಿಗಳು ಪದಾಧಿಕಾರಿಗಳು, ಮಜ್ಲಿಸೆ ಇಸ್ಲಾಹ್-ವ-ತಂಝೀಂ ಸಂಸ್ಥೆ ಮುಖಂಡರ ಮಾತುಕತೆ ಸಂದರ್ಭ ಮಸೀದಿಗಳನ್ನು ಮಂಗಳವಾರ ತೆರೆಯುವ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ಮನೆಯಿಂದಲೇ ವಝೂ ಮಾಡಿಕೊಂಡು ಬರಬೇಕು, ನಮಾಜ್ ಹಾಸುಗಳನ್ನು ಮನೆಯಿಂದಲೇ ತರತಕ್ಕದ್ದು, ಮಸೀದಿ ದ್ವಾರದಲ್ಲಿ ಸ್ಯಾನಿಟೈಸರ್ ಮತ್ತು ನೀರಿನ ವ್ಯವಸ್ಥೆ ಮಸೀದಿ ಕಮಿಟಿಯವರು ಮಾಡಬೇಕು. ದೈಹಿಕ ಅಂತರ ಕಾಪಾಡಿಕೊಳ್ಳುವ ಜೊತೆ ಸರಕಾರದ ಕೋವಿಡ್ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಂಝೀಂ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಬಹಳ ದಿನಗಳ ಬಳಿಕ ಮುಸ್ಲಿಮರಿಗೆ ಮಸೀದಿಗೆ ಹೋಗುವ ಭಾಗ್ಯ ದೊರೆತಿದ್ದು, ಇದನ್ನು ನಿಯಮವಾಳಿಗನುಗುಣವಾಗಿ ಪ್ರಾರ್ಥನೆಗೆ ಬಳಸಬೇಕಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭ ಎರಡೂ ಜಮಾತ್ ಪ್ರಧಾನ ಕಾಝಿಗಳಾದ ಮೌಲಾನ ಇಕ್ಬಾಲ್ ಮುಲ್ಲಾ ನದ್ವಿ, ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಮದನಿ, ತಂಝೀಂ ಅಧ್ಯಕ್ಷ ಎಸ್.ಎಂ.ಸೈಯದ್ ಫರ್ವಾಝ್, ಜಮಾಅತುಲ್ ಮುಸ್ಲಿಮಿನ್ ಅಧ್ಯಕ್ಷ ಜಾನ್ ಅಬ್ದುಲ್ ರಹಮಾನ್ ಮೊತೆಶಮ್, ವಿವಿಧ ಮಸೀದಿಯ ಮುಖಂಡರು, ಉಲೇಮಾಗಳು ಉಪಸ್ಥಿತರಿದ್ದರು.

ನಾವುಂದ ಮರವಂತೆ ಮಸೀದಿ: ಜೂನ್ 30 ರವರೆಗೆ ತೆರೆಯದು

ಜೂನ್ 8 ರಿಂದ ಮಸೀದಿ ಪುನರಾರಂಭಿಸಲು ಸರಕಾರವು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಅಧ್ಯಕ್ಷರಾದ ತೌಪೀಕ್  ಅಬ್ದುಲ್ಲಾ ಹಾಜಿ ರವರ ಸಭಾಧ್ಯಕ್ಷತೆ ಯಲ್ಲಿ  ಸಮಿತಿಯ ತುರ್ತು ಸಭೆ ನಡೆದಿದ್ದು  ಜೂನ್ 30 ರ ವರೆಗೆ ಮಸೀದಿ ತೆರೆಯದಿರಲು ಸರ್ವಾನುಮತದಿಂದ  ತೀರ್ಮಾನಿಸಲಾಗಿದೆ.

ಮಸೀದಿಗೆ ಅಧಿಕ ಜನರು ಸೇರುವುದರಿಂದ ಹಾಗೂ ಪರಿಸರದಲ್ಲಿ  ಅಪರಿಚಿತರು ಮಸೀದಿಗೆ ಆಗಮಿಸುವುದರಿಂದ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊರೋನ ಸಾಂಕ್ರಾಮಿಕ ರೋಗವು ತೀವೃ ರೀತಿಯಲ್ಲಿ ಹೆಚ್ಚುತಿರುವುದರಿಂದ  ಕೇಂದ್ರ / ರಾಜ್ಯ ಹಾಗು ವಕ್ಫ್ ಬೋರ್ಡ್ ಸೂಚಿಸಿದ ನಿಯಮಗಳನ್ನು ಪಾಲಿಸಲು ಅಸಾಧ್ಯವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಚರ್ಚೆಗಳ ಮೂಲಕ  ಸಾಂಕ್ರಾಮಿಕ ರೋಗವು ಮತ್ತಷ್ಟು ಹರಡಬಹುದೆಂದು ಮನಗೊಂಡು ಮಸೀದಿ ತೆರೆಯದಿರುವ ನಿರ್ಧಾರಕ್ಕೆ ಬರಲಾಗಿದೆ.

ಜುಲೈ1 ರಂದು ಮತ್ತೊಮ್ಮೆ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಜಮಾಅತ್ ದಾರರು  ಈ ಮೊದಲಿನಂತೆ  ಸಹಕರಿಸಬೇಕೆಂದು ಮುಹ್ಯದ್ದೀನ್  ಜುಮುಅ ಮಸೀದಿ  ನಾವುಂದ ಮರವಂತೆ  ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಂತಿಸಿದ್ದಾರೆ.

ಲಾಕ್ ಡೌನ್ ಸಡಿಲಿಕೆ ಮಾಡಿ ಮಸೀದಿ ಪುನಾರಂಭಿಸಲು ಅನುಮತಿ ನೀಡಿರುವ ಸರಕಾರದ ತೀರ್ಮಾನವನ್ನು ಸಭೆ ಸಂದರ್ಭ ಸ್ವಾಗತಿಸಲಾಗಿದೆ.

 

 

 

Get real time updates directly on you device, subscribe now.