ಕುಂದಾಪುರ: ಲಾಕ್ಡೌನ್ ಹಿಂತೆಗೆದರೂ ಜನ ಸಂಚಾರವಿಲ್ಲದ ಬಸ್ ನಿಲ್ದಾಣ, ವ್ಯಾಪಾರಸ್ಥರು ಕಂಗಾಲು

ಬಡ ವ್ಯಾಪಾರಸ್ಥರು ಕಡೇ ಪಕ್ಷ ಲಾಕ್ ಡೌನ್ ಸಮಯದ ಅಂಗಡಿ ಬಾಡಿಗೆಯನ್ನಾದರೂ ಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.

ಪುರಸಭೆಗೆ ಮಾಸಿಕ ಸಾವಿರಾರು ರೂಪಾಯಿ ಬಾಡಿಗೆ ಸಲ್ಲಿಸುವ ಬಸ್ಸು ನಿಲ್ದಾಣದ ಒಳಗಿನ ಅಂಗಡಿ ವ್ಯಾಪಾರಸ್ಥರು ದಿಕ್ಕು ತೋಚದಂತಾಗಿ ಚಡಪಡಿಸುತ್ತಿದ್ದಾರೆ.

ಕರಾವಳಿ ಕರ್ನಾಟಕ ವರದಿ/ಎಸ್.ಎಂ.ಮಝರ್
ಕುಂದಾಪುರ:  ಕರೋನಾ ಮಹಾಮಾರಿಯಿಂದಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಿಸಲ್ಪಟ್ಟ ನಂತರ ನೀರವವಾಗಿದ್ದ ಕುಂದಾಪುರದ ಹೊಸ ಬಸ್ಸು ನಿಲ್ದಾಣ ಇದೀಗ ಲಾಕ್ ಡೌನ್ ಕಟ್ಟುನಿಟ್ಟು ಹಿಂತೆಗೆಯಲ್ಪಟ್ಟು ಬೆರಳೆಣಿಕೆಯಷ್ಟು ಬಸ್ಸುಗಳ ಓಡಾಟ ಆರಂಭಗೊಂಡರೂ ಪ್ರಯಾಣಿಕರಿಲ್ಲದೆ ಬಿಕೊ ಎನ್ನುತ್ತಿದೆ. ಇದರಿಂದಾಗಿ ಪುರಸಭೆಗೆ ಮಾಸಿಕ ಸಾವಿರಾರು ರೂಪಾಯಿ ಬಾಡಿಗೆ ಸಲ್ಲಿಸುವ ಬಸ್ಸು ನಿಲ್ದಾಣದ ಒಳಗಿನ ಅಂಗಡಿ ವ್ಯಾಪಾರಸ್ಥರು ಮಾತ್ರ ದಿಕ್ಕು ತೋಚದಂತಾಗಿ ಚಡಪಡಿಸುತ್ತಿದ್ದಾರೆ.

ಅನಿರೀಕ್ಷಿತ  ಲಾಕ್ ಡೌನ್ ಆರಂಭಗೊಂಡು ಅಂಗಡಿಗಳಿಗೆ ದಿಢೀರ್ ಶಟರ್ ಎಳೆದಿದ್ದರಿಂದ ಅಂಗಡಿಯಲ್ಲಿದ್ದ ಬೇಕರಿ ಸಾಮಗ್ರಿ ಸಹಿತ ಇನ್ನಿತರ ಹಣ್ಣು ಹಂಪಲು ತಿಂಡಿ ತಿನಿಸುಗಳು ಸಂಪೂರ್ಣ ಹಾಳಾಗಿ ನಷ್ಟ ಅನುಭವಿಸಿದ ವ್ಯಾಪಾರಸ್ಥರು, ಕೆಲವು ತಿಂಗಳ ವನವಾಸ ಅನುಭವಿಸಿದ್ದರು. ಇದೀಗ ಲಾಕ್ಡೌನ್ ಭಾಗಶ: ಹಿಂತೆಗೆದು ಕೊಂಡಿದ್ದರಿಂದ ಮತ್ತೆ ಸಾಲಸೋಲ ಮಾಡಿ ಅಂಗಡಿಯಲ್ಲಿ ಸಾಮಾನುಗಳನ್ನು ಹಾಕಿಸಿಕೊಂಡರೂ ಗಿರಾಕಿಗಳ ಸುಳಿವೇ ಇಲ್ಲದೆ ಮತ್ತೇ ಆತಂಕಿತರಾಗಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಒಂದೇ ಸಮನೆ ಏರುತ್ತಿರುವ ಕರೋನಾ ಪಾಸಿಟಿವ್ ಪ್ರಕರಣ ಎಂಬ ಸುದ್ದಿಗಳಿಂದಾಗಿ ಸಾರ್ವಜನಿಕರ ಓಡಾಟ ವಿರಳವಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ಬಸ್ ನಿಲ್ದಾಣ ಹೊರತು ಪಡಿಸಿ ನಗರದ ಇತರೆಡೆಗಳಲ್ಲಿ ಸಾರ್ವಜನಿಕರ ಸಂಚಾರ ತಕ್ಕ ಮಟ್ಟಿಗೆ ಸಹಜವಾಗಿದ್ದು, ವ್ಯಾಪಾರ ವಹಿವಾಟುಗಳು  ಕೂಡಾ ತಕ್ಕ ಮಟ್ಟಿಗೆ ಎಂಬಂತೆ ನಡೆಯುತ್ತಿವೆ.. ಆದರೆ ಹೊಸ ಬಸ್ಸು ನಿಲ್ದಾಣ ಮಾತ್ರ ಈಗಿನ್ನೂ ಲಾಕ್ ಡೌನ್ ಮನಸ್ಥಿತಿಯಿಂದ ಹೊರ ಬಂದಿಲ್ಲ. ಇದರ ನೇರ ಪರಿಣಾಮವು ನಿಲ್ದಾಣದೊಳಕ್ಕೆ ಪುರಸಭೆಯ ವಾಣಿಜ್ಯ ಮಳಿಗೆಗೆಗಳನ್ನು ಏಲಂ ಗೆ ಪಡೆದುಕೊಂಡಿರುವ ವ್ಯಾಪಾರಸ್ಥರನ್ನು ಕಾಡುತ್ತಿದೆ. ಅಂಗಡಿ ಬಾಡಿಗೆ ಸಲ್ಲಿಸುವುದು ಬಿಡಿ,  ತಮ್ಮ ದೈನಿಂದಿನ ಖರ್ಚುಗಳಿಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ತಮ್ಮ ಆತಂಕವನ್ನು ತೋಡಿಕೊಂಡಿರುವ ಬಡ ವ್ಯಾಪಾರಸ್ಥರು ಕಡೇ ಪಕ್ಷ ಲಾಕ್ ಡೌನ್ ಸಮಯದ ಅಂಗಡಿ ಬಾಡಿಗೆಯನ್ನಾದರೂ ಮನ್ನಾ ಮಾಡುವಂತೆ ಅಗ್ರಹಿಸಿದ್ದಾರೆ.

 

 

Get real time updates directly on you device, subscribe now.