ಲಾಕ್‌ಡೌನ್ ಸಂದರ್ಭ ಪಾರ್ಲೆ-ಜಿ 40ವರ್ಷಗಳಲ್ಲೇ ದಾಖಲೆ ಮಾರಾಟ, ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರ
ಲಾಕ್‌ಡೌನ್ ಸಂದರ್ಭ ಮೂರು ಕೋಟಿ ಪಾರ್ಲೆ-ಜಿ ಬಿಸ್ಕಿಟ್‌ಗಳನ್ನು ಕಂಪೆನಿ ಉಚಿತವಾಗಿ ಕೂಡ ನೀಡಿದ್ದು ಜನರ ಹಸಿವು ತಣಿಸಲು ಸೇವೆ ನೀಡಿದೆ.
ಹಲವರು ಇತ್ತೀಚೆಗೆ ತೀವೃ ನಷ್ಟ ಅನುಭವಿಸಿದ್ದ ಪಾರ್ಲೆ-ಜಿ ಸಂಸ್ಥೆ ಲಾಕ್‌ಡೌನ್ ಸಂಕಷ್ಟದ ಕಾಲದಲ್ಲಿ ಪುಟಿದೆದ್ದು ನಿಂತಿದ್ದನ್ನು ಕಂಡು ಬೆರಗಾಗಿ ಅದರ ಸಾಧನೆ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಮುಂಬೈ: ಕೋವಿಡ್ ಲಾಕ್‌ಡೌನ್ ಸಂದರ್ಭ ಹಸಿವಿನಿಂದ ತತ್ತರಿಸಿದ ಅತೀ ಹೆಚ್ಚು ಜನ ಪಾರ್ಲೆ-ಜಿ ಬಿಸ್ಕಿಟ್ ಖರೀದಿಸಿರುವ ಸಂಗತಿ ಟ್ವಿಟರ್‌ನಲ್ಲಿ ಭಾರೀ ಜನಪ್ರಿಯವಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಕಳೆದ ನಲವತ್ತು ವರ್ಷಗಳಲ್ಲಿ ಆಗದಂಥ ದೊಡ್ಡ ಬೆಳವಣಿಗೆ ಪಾರ್ಲೆ-ಜಿ ಕಂಪೆನಿ ಕಂಡಿದ್ದೇ ಅದಕ್ಕೆ ಕಾರಣ.
ಬಿಸ್ಕಿಟ್ ಮಾರಾಟ ವಲಯದಲ್ಲಿ ಶೇ.5ರಷ್ಟು ಮಾರುಕಟ್ಟೆ ಪಾಲು ಗಳಿಸಿದೆ. ಲಾಕ್‌ಡೌನ್ ಸಂದರ್ಭ ಮೂರು ಕೋಟಿ ಪಾರ್ಲೆ-ಜಿ ಬಿಸ್ಕಿಟ್‌ಗಳನ್ನು ಕಂಪೆನಿ ಉಚಿತವಾಗಿ ಕೂಡ ನೀಡಿದ್ದು ಜನರ ಹಸಿವು ತಣಿಸಲು ಸೇವೆ ನೀಡಿದೆ. ಎಪ್ರಿಲ್-ಮೇ ತಿಂಗಳಲ್ಲಿ ಪಾರ್ಲೆ-ಜಿ ಬಿಸ್ಕಿಟ್‌ಗಳನ್ನು ಜನ ಖರೀದಿಸಿದ್ದಾರೆ. ಲಾಕ್‌ಡೌನ್‌ನಿಂದ ಹಸಿವಿನಿಂದ ತತ್ತರಿಸಿದ ಬಡವರಿಗೆ ಹಲವು ಸಂಘಸಂಸ್ಥೆಗಳು ಕಡಿಮೆ ಬೆಲೆಯ ಆದರೆ ಪೌಷ್ಠಿಕಾಂಶ ಉಳ್ಳ ಈ ಬಿಸ್ಕಿಟ್‌ಗಳನ್ನು ಖರೀದಿಸಿ ಹಂಚಿದರು. ಭಾರತದ ಮೂಲೆ ಮೂಲೆಗಳಲ್ಲೂ ಯಾವ ಬಿಸ್ಕಿಟ್ ದೊರೆಯದಿದ್ದರೂ ಪಾರ್ಲೆ-ಜಿ ಬಿಸ್ಕಿಟ್‌ಗಳು ಮಾತ್ರ ದೊರೆಯುತ್ತಿದ್ದವು.
ಪಾರ್ಲೆ ಬಿಸ್ಕಿಟ್‌ಗಳು ತಮ್ಮ ಬದುಕಿನ ಹೋರಾಟದ ದಿನಗಳಲ್ಲಿ ಹೇಗೆ ಹಸಿವು ತಣಿಸುತ್ತಿದ್ದವು ಎಂಬ ಬಗ್ಗೆ ಟ್ವಿಟರ್‌ನಲ್ಲಿ ಅನೇಕ ಮಂದಿ ಅಭಿಮಾನದಿಂದ ಬರೆದಿದ್ದಾರೆ. ನಟ ರಣ್‌ದೀಪ್ ಹೂಡಾ ತನ್ನ ರಂಗಭೂಮಿಯ ದಿನಗಳಿಂದಲೂ ಚಾದೊಂದಿಗೆ ಪಾರ್ಲೆ ಜಿ ಬಿಸ್ಕಿಟ್ ಸೇವಿಸುತ್ತಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಪಾರ್ಲೆ-ಜಿ ಬಿಸ್ಕಿಟ್ ಸ್ವಾದವನ್ನು ಮೀರಿಸುವುದು ಯಾವ ಬ್ರಾಂಡ್ ಬಿಸ್ಕಿಟ್‌ನಿಂದಲೂ ಅಸಾಧ್ಯ ಎಂದು ಅನೇಕರು ಹೇಳಿಕೊಂಡು ತಮ್ಮ ಬಾಲ್ಯದ ದಿನಗಳ ನೆನಪುಗಳೊಂದಿಗೆ ಭಾವುಕರಾಗಿದ್ದಾರೆ.
ಇನ್ನೂ ಹಲವರು ಇತ್ತೀಚೆಗೆ ತೀವೃ ನಷ್ಟ ಅನುಭವಿಸಿದ್ದ ಪಾರ್ಲೆ-ಜಿ ಸಂಸ್ಥೆ ಲಾಕ್‌ಡೌನ್ ಸಂಕಷ್ಟದ ಕಾಲದಲ್ಲಿ ಪವಾಡಸದೃಶ್ಯ ಎಂಬಂತೆ ಪುಟಿದೆದ್ದು ನಿಂತಿದ್ದನ್ನು ಕಂಡು ಬೆರಗಾಗಿ ಅದರ ಸಾಧನೆ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ಪಾರ್ಲೆ-ಜಿಯನ್ನು ಚಹಾದೊಂದಿಗೆ, ನೀರಿನಲ್ಲಿ ಅದ್ದಿಕೊಂಡು ಅಥವಾ ಹಾಗೆಯೇ ತಿಂದರೂ ಹಸಿವು ತಣಿಸುವ ವಿಶಿಷ್ಠತೆ ಬಿಸ್ಕಿಟ್ ಹೊಂದಿದೆ ಎಂದು ಲಾಕ್‌ಡೌನ್ ಸಂದರ್ಭ ಬೇರೇನೂ ತಿನ್ನಲು ಸಿಗದೆ ಅದನ್ನೇ ನೆಚ್ಚಿಕೊಂಡ ಜನರು ಹೇಳಿದ್ದಾರೆ.