ದೇಶದ್ರೋಹ ಪ್ರಕರಣ: ವಿನೋದ್ ದುವಾ ಬಂಧನಕ್ಕೆ ಸುಪ್ರೀಂ ತಾತ್ಕಾಲಿಕ ತಡೆ

ಇಂಥ ಟೀಕೆಗಳ ಬಗ್ಗೆ ದೇಶದ್ರೋಹ ಪ್ರಕರಣ ದಾಖಲಿಸುವುದಾದರೆ ದೇಶದಲ್ಲಿ ಕೇವಲ ಎರಡು ಟಿವಿ ಚಾನೆಲ್‌ಗಳು ಮಾತ್ರ ಕಾರ್ಯನಿರ್ವಹಿಸುವಂತಾಗುತ್ತದೆ.

ಲಾಕ್‌ಡೌನ್ ಘೋಷಿಸಿದ ವಿಧಾನಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿನೋದ್ ದುವಾ ಅವರು ಮಾಡಿದ ಒಂದು ಟೀಕೆ ಆಧರಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಬಿಜೆಪಿ ಮುಖಂಡರೊಬ್ಬರು ನೀಡಿದ ದೂರಿನನ್ವಯ ಖ್ಯಾತ ಪತ್ರಕರ್ತ ವಿನೋದ್ ದುವಾ ವಿರುದ್ಧ ದೇಶದ್ರೋಹ ಪ್ರಕರಣದಲ್ಲಿ ಜುಲೈ6ರ ತನಕ ಬಂಧಿಸದಂತೆ ಸುಪ್ರೀಂ ತಾತ್ಕಾಲಿಕ ತಡೆ ನೀಡಿದೆ.

ದೇಶದ್ರೋಹ ಪ್ರಕರಣ ರದ್ದು ಕೋರಿ ವಿನೋದ್ ದುವಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು. ಯು. ಲಲಿತ್ ಅವರ ತ್ರಿಸದಸ್ಯ ಪೀಠವು ತನಿಖೆಗೆ ತಡೆ ನೀಡಲು ಇದೇ ಸಂದರ್ಭ ನಿರಾಕರಿಸಿದೆ. ವಿನೋದ್ ದುವಾ ಅವರಿಗೆ ತನಿಖೆಗೆ ಹಾಜರಾಗಲು ಇಪ್ಪತ್ನಾಲ್ಕು ಗಂಟೆ ಕಾಲಾವಕಾಶ ನೀಡುವಂತೆ ಶಿಮ್ಲಾ ಪೊಲೀಸರಿಗೆ ಸೂಚಿಸಿದೆ. ಇದೇ ಸಂದರ್ಭ ವಿನೋದ್ ದುವಾ ಅವರಿಗೂ ತನಿಖೆಗೆ ಪೊಲೀಸರಿಗೆ ಸಹಕರಿಸುವಂತೆ ಹೇಳಿದೆ.

ಲಾಕ್‌ಡೌನ್ ಘೋಷಿಸಿದ ವಿಧಾನಕ್ಕೆ ಸಂಬಂಧಿಸಿ ಭಾರತ ಸರಕಾರದ ವೈಫಲ್ಯವನ್ನು ಬೊಟ್ಟು ಮಾಡುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿನೋದ್ ದುವಾ ಅವರು ಮಾಡಿದ ಒಂದು ಟೀಕೆ ಆಧರಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ಮುಖಂಡ ವಿನೋದ್ ದುವಾ ವಿರುದ್ಧ ದೂರು ನೀಡಿದ್ದರು.

ಒಂದು ವೇಳೆ ಇಂಥ ಟೀಕೆಗಳ ಬಗ್ಗೆ ದೇಶದ್ರೋಹ ಪ್ರಕರಣ ದಾಖಲಿಸುವುದಾದರೆ ದೇಶದಲ್ಲಿ ಕೇವಲ ಎರಡು ಟಿವಿ ಚಾನೆಲ್‌ಗಳು ಮಾತ್ರ ಕಾರ್ಯನಿರ್ವಹಿಸುವಂತಾಗುತ್ತದೆ. ವಿನೋದ್ ದುವಾ ಅವರ ಟೀಕೆ ಕ್ರಿಮಿನಲ್ ಸ್ವರೂಪದ್ದಲ್ಲ ಎಂದು ಅವರ ವಕೀಲರು ವಾದಿಸಿದ್ದು, ಎಫ್‌ಐಆರ್ ರದ್ಧತಿಗೆ ಕೋರಿದ್ದರು.

Get real time updates directly on you device, subscribe now.