ಕುವೈಟ್ ಕನ್ನಡಿಗರನ್ನು ಮರೆತೆ ಬಿಟ್ಟಿತೆ ಕೇಂದ್ರ ಸರಕಾರ? ಸದಾನಂದ ಗೌಡರ ಭರವಸೆ ಏನಾಯ್ತು?

ಕುವೈಟ್‌ನಲ್ಲಿ ಐವತ್ತು ಸಾವಿರಕ್ಕೂ ಅಧಿಕ ಕನ್ನಡಿಗರು ಇದ್ದಾರೆ. ಕರಾವಳಿ ಕರ್ನಾಟಕದ ಇಪ್ಪತ್ತೈದು ಸಾವಿರ ಮಂದಿ ಇದ್ದಾರೆ.

ಲಾಕ್‌ಡೌನ್ ದೆಸೆಯಿಂದ ಕುವೈಟ್‌ನಲ್ಲಿ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು, ವಿಸಿಟ್ ವೀಸಾದಲ್ಲಿ ಕುವೈಟ್‌ಗೆ ಹೋದವರು, ಗರ್ಭಿಣಿಯರು, ಹಿರಿಯ ನಾಗರಿಕರು, ಕಡಿಮೆ ವೇತನದ ಕೆಲಸಗಳಲ್ಲಿ ದುಡಿಯುತ್ತಿದ್ದ ಕನ್ನಡಿಗರ ಸ್ಥಿತಿ ಚಿಂತಾಜನಕವಾಗಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೊರೋನಾ ಲಾಕ್‌ಡೌನ್‌ನಿಂದ ಕುವೈಟ್ ದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕನ್ನಡಿಗರಿಗಾಗಿ ವಿಮಾನ ವ್ಯವಸ್ಥೆ ಮಾಡುವುದಾಗಿ ಕೇಂದ್ರ ಸಚಿವ ಸದಾನಂದ ಗೌಡರು ನೀಡಿದ ಭರವಸೆ ಈಡೇರಿಲ್ಲ. ‘ವಂದೇ ಭಾರತ್’ ಮಿಷನ್ ಅಡಿ ಜೂ.16ರಂದು ಕುವೈಟ್‌ನಲ್ಲಿರುವ ಕನ್ನಡಿಗರನ್ನು ಬೆಂಗಳೂರಿಗೆ ತರಲು ನಿಗದಿಯಾಗಿದ್ದ ವಿಮಾನ ರದ್ದುಗೊಂಡಿದೆ.

ಕುವೈಟ್ ಕನ್ನಡಿಗರೊಂದಿಗೆ ವೀಡಿಯೊ ಸಂವಾದ ನಡೆಸಿದ್ದ ಸದಾನಂದ ಗೌಡರು ತಾಯ್ನಾಡಿಗೆ ಬರಲು ಬಯಸುವ ರಾಜ್ಯದ ಜನರಿಗೆ ವಿಮಾನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಕುವೈಟ್‌ನಿಂದ ಮೂರು ವಿಮಾನಗಳನ್ನು ಬೇರೆ ರಾಜ್ಯಗಳಿಗೆ ವ್ಯವಸ್ಥೆ ಮಾಡಿ ಜನರನ್ನು ಕರೆತರಲಾದ ಮಾದರಿಯಲ್ಲೇ ಕರ್ನಾಟಕದ ಕನ್ನಡಿಗರನ್ನೂ ಕುವೈಟ್ ದೇಶದಿಂದ ತರಲು ವಿಮಾನ ವ್ಯವಸ್ಥೆ ಕಲ್ಪಿಸುವುದಾಗಿ ಸದಾನಂದ ಗೌಡರು ಭರವಸೆ ನೀಡಿದ್ದರು.

ಕುವೈಟ್‌ನಿಂದ ಮಂಗಳೂರು ಮತ್ತು ಬೆಂಗಳೂರಿಗೆ ಕನ್ನಡಿಗರನ್ನು ಕರೆತರುವ ಬಗ್ಗೆ ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಹಂತಹಂತವಾಗಿ ವಿಮಾನ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದರು.

ವಿಡಿಯೋ ಸಂವಾದದಲ್ಲಿ ಕರ್ನಾಟಕ ಮುಸ್ಲಿಂ ವೆಲ್‌ಫೇರ್‌ ಅಸೋಸಿಯೇಷನ್‌ ಅಬ್ದುಲ್‌ ನಾಸಿರ್‌ ಖಾನ್‌, ತುಳು ಕೂಟ ಕುವೈಟ್ ಅಧ್ಯಕ್ಷ ರಮೇಶ್ ಎಸ್. ಭಂಡಾರಿ, ಇಂಡಿಯನ್‌ ಮುಸ್ಲಿಂ ಅಸೋಸಿಯೇಷನ್‌ ಜಾಫರ್‌ ಸಾದಿಕ್‌ ,ಕುವೈಟ್‌ ಕನ್ನಡ ಕೂಟದ ರಾಜೇಶ್‌ ವಿಠಲ್‌, ಕುವೈಟ್‌ ಕೆನರಾ ವೆಲ್‌ಫೇರ್‌ ಅಸೋಸಿಯೇನ್‌ ಸ್ಟೀವನ್‌ ರೇಗೋ, ಕುವೈಟ್‌ ಬಂಟರ ಸಂಘದ ಗುರು ಹೆಗ್ಡೆ, ಕುವೈಟ್‌ ಬಿಲ್ಲವ ಸಂಘದ ಕೃಷ್ಣ ಎಸ್‌. ಪೂಜಾರಿ ಪಾಲ್ಗೊಂಡಿದ್ದರು.

ಕುವೈಟ್‌ನಲ್ಲಿ ಒಂಬತ್ತು ಲಕ್ಷ ಅನಿವಾಸಿ ಭಾರತೀಯರಿದ್ದು, ಇವರಲ್ಲಿ ಐವತ್ತು ಸಾವಿರಕ್ಕೂ ಅಧಿಕ ಕನ್ನಡಿಗರು ಇದ್ದಾರೆ. ಕರಾವಳಿ ಕರ್ನಾಟಕದ ಇಪ್ಪತ್ತೈದು ಸಾವಿರ ಮಂದಿ ಇದ್ದಾರೆ.

ತುಳು ಕುವೈಟ್ ಅಧ್ಯಕ್ಷ ರಮೇಶ್ ಎಸ್. ಭಂಡಾರಿ, ಕೇರಳ ಕುವೈಟ್ ಮುಸ್ಲಿಂ ಅಸೋಸಿಯೇಶನ್ ಕರ್ನಾಟಕ ಶಾಖೆ, ಅನಿವಾಸಿ ಕನ್ನಡಿಗ ಮಂಜೇಶ್ವರ ಮೋಹನ ದಾಸ್, ಆರತಿ ಕೃಷ್ಣ ಅವರ ಸತತ ಮನವಿಯ ಫಲವಾಗಿ ಕೇಂದ್ರ ಸಚಿವ ಸದಾನಂದ ಗೌಡರು ಕುವೈಟ್ ಕನ್ನಡಿಗರಿಗೆ ಸ್ಪಂದಿಸುವ ಭರವಸೆ ನೀಡಿದ್ದರು.

ಜೂ.16ರಂದು ಕುವೈಟ್-ಬೆಂಗಳೂರು ವಿಮಾನ ಕೂಡ ನಿಗದಿಯಾಗಿತ್ತು. ಈಗ ಈ ವಿಮಾನದ ಮಾಹಿತಿ ವಿದೇಶಾಂಗ ಸಚಿವಾಲಯದ ಜಾಲತಾಣದಲ್ಲಿನ ವಿಮಾನಗಳ ಪಟ್ಟಿಯಲ್ಲಿ ಇಲ್ಲ. ಕುವೈಟ್ ಭಾರತೀಯ ರಾಯಬಾರ ಕಚೇರಿ ಅಧಿಕಾರಿಗಳು ತಾಂತ್ರಿಕ ಸಮಸ್ಯೆಯಿಂದ ವಿಮಾನ ರದ್ದುಗೊಂಡಿರುವುದಾಗಿ ಹೇಳಿದ್ದಾರೆ.

600ಕ್ಕೂ ಅಧಿಕ ಕುವೈಟ್ ಕನ್ನಡಿಗರು ಭಾರತೀಯ ರಾಯಭಾರ ಕಚೇರಿಯಲ್ಲಿ ನೊಂದಣಿ ಮಾಡಿಕೊಂಡು ಕಾಯುತ್ತಿದ್ದಾರೆ.

ಲಾಕ್‌ಡೌನ್ ದೆಸೆಯಿಂದ ಕುವೈಟ್‌ನಲ್ಲಿ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು, ವಿಸಿಟ್ ವೀಸಾದಲ್ಲಿ ಕುವೈಟ್‌ಗೆ ಹೋದವರು, ಗರ್ಭಿಣಿಯರು, ಹಿರಿಯ ನಾಗರಿಕರು, ಕಡಿಮೆ ವೇತನದ ಕೆಲಸಗಳಲ್ಲಿ ದುಡಿಯುತ್ತಿದ್ದ ಕನ್ನಡಿಗರ ಸ್ಥಿತಿ ಚಿಂತಾಜನಕವಾಗಿದೆ.

ಇದೀಗ ಸದಾನಂದ ಗೌಡರು ಮತ್ತೆ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಕುವೈಟ್ ನಿಂದ ಕನ್ನಡಿಗರನ್ನು ಹಂತಹಂತವಾಗಿ ಕರೆತರುವ ಸರಕಾರದ ಯೋಜನೆಗೆ ಮರುಜೀವ ಕೋಡುತ್ತಾರೆಯೇ ಎಂದು ಕುವೈಟ್‌ನಲ್ಲಿರುವ ಕನ್ನಡಿಗರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Get real time updates directly on you device, subscribe now.