ಬೆಂಗಳೂರಿನಿಂದ ಮನೆಯತ್ತ ಹೊರಟಿದ್ದ ಕುಂದಾಪುರದ ಯುವಕ ಬಸ್ಸಿನಲ್ಲೇ ಸಾವು
ಬೆಂಗಳೂರಿನಿಂದ ಖಾಸಗಿ ಬಸ್‍ನಲ್ಲಿ ಕುಂದಾಪುರದ ತನ್ನ ಮನೆಗೆ ಹೊರಟಿದ್ದ ಸಾಫ್ಟ್‌ವೇರ್ ಉದ್ಯೋಗಿ ಯುವಕ ಬಸ್‌ನಲ್ಲೇ ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆ
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಬೆಂಗಳೂರಿನಿಂದ ಖಾಸಗಿ ಬಸ್‍ನಲ್ಲಿ ಕುಂದಾಪುರದ ತನ್ನ ಮನೆಗೆ ಹೊರಟಿದ್ದ ಸಾಫ್ಟ್‌ವೇರ್ ಉದ್ಯೋಗಿ ಯುವಕ ಬಸ್‌ನಲ್ಲೇ ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಮೃತರನ್ನು ಕೋಟೇಶ್ವರ ಕುಂಬ್ರಿ ನಿವಾಸಿ ಚೈತನ್ಯ (25) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಇಂಜಿನಿಯರ್ ಶಿಕ್ಷಣ ಪಡೆದಿದ್ದ ಯುವಕ ಎರಡು ವರ್ಷಗಳಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು.
ಕೆಲಸ ಕಡಿಮೆ ಇರುವ ಕಾರಣ ಮನೆಗೆ ಬರುವುದಾಗಿ ತಿಳಿಸಿದ್ದ ಚೈತನ್ಯ ಸೋಮವಾರ ರಾತ್ರಿ ಖಾಸಗಿ ಬಸ್‌ನಲ್ಲಿ ಊರಿಗೆ ಹೊರಟಿದ್ದರು. ಬೆಳಿಗ್ಗೆ 6.30ರ ಸುಮಾರಿಗೆ ಕರೆಮಾಡಿ ಬಾರ್ಕೂರು ಸಮೀಪ ಬರುತ್ತಿರುವುದಾಗಿ ಮನೆಯವರಿಗೆ ತಿಳಿಸಿದ್ದರು
ಆದರೆ ಚೈತನ್ಯ ಕೋಟೇಶ್ವರದಲ್ಲೂ ಇಳಿಯದ ಹಿನ್ನೆಲೆ ನಿರ್ವಾಹಕನಿಗೆ ಅನುಮಾನ ಬಂದು ಹತ್ತಿರ ಹೋಗಿ ನೋಡಿದಾಗ ಚೈತನನ್ಯ ಅಸ್ವಸ್ಥಗೊಂಡು ಮಲಗಿದ್ದರು. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಚೈತನ್ಯ ಅವರನ್ನು ದಾಖಲಿಸಲು ಕರೆದುಕೊಂಡು ಹೋಗಲಾಯಿತು. ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ಕಳೆದ ಕೆಲವು ತಿಂಗಳ ಹಿಂದೆ ಇದೇ ರೀತಿಯಲ್ಲಿ ಇನ್ನೋರ್ವ ಯುವಕನೂ ಬೆಂಗಳೂರಿನಿಂದ ಮನೆಗೆ ಬರುವಾಗ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಇನ್ನೋರ್ವ ಯುವಕನ ಸಾವಿಗೆ ಕುಂದಾಪುರದ ಜನ ಮರುಗಿದ್ದಾರೆ.