ಭಟ್ಕಳ: ಕುಂದಾಪುರಕ್ಕೆ ತೆರಳುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ
ಪ್ರತ್ಯೇಕ ಘಟನೆಯಲ್ಲಿ ಗುಡಿಗದ್ದೆ ಕ್ರಾಸ್ ಸಮೀಪ ಕಾರು ಪಲ್ಟಿ ಹೊಡೆದ ಪರಿಣಾಮ ಚಾಲಕ ಸೇರಿ ಆರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ಕರಾವಳಿ ಕರ್ನಾಟಕ ವರದಿ
ಭಟ್ಕಳ: ಆಂಧ್ರ ಪ್ರದೇಶದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ವಿದ್ಯುತ್ ಕಂಬ ರಸ್ತೆಗೆ ವಾಲಿಕೊಂಡಿತ್ತು. ತಕ್ಷಣ ಆಗಮಿಸಿದ ಲೈನ್‌ಮ್ಯಾನ್ ವಿದ್ಯುತ್ ಸಂಚಾರ ಕಡಿತಗೊಳಿಸಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಸ್ವಲ್ಪ ಹೊತ್ತು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಸುಗಮ ಸಂಚಾರ ಆಗುವಂತೆ ಕ್ರಮಕೈಗೊಂಡರು.
ಕಾರು ಪಲ್ಟಿ, ಆರು ಮಂದಿಗೆ ಗಾಯ
ಪ್ರತ್ಯೇಕ ಘಟನೆಯಲ್ಲಿ ಗುಡಿಗದ್ದೆ ಕ್ರಾಸ್ ಸಮೀಪ ಕಿರುಬಚ್ಚಲು ಸೇತುವೆ ಬಳಿಯ ತಿರುವಿನಲ್ಲಿ ಕಾರು ಪಲ್ಟಿ ಹೊಡೆದ ಪರಿಣಾಮ ಚಾಲಕ ಸೇರಿ ಆರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಾಳುಗಳನ್ನು ಮುರ್ಡೇಶ್ವರ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಹೊನ್ನಾವರ ತಾಲೂಕಿನ ನವಾಯತ್ ಕಾಲನಿಯಿಂದ ಮುರ್ಡೇಶ್ವರಕ್ಕೆ ತೆರಳುತ್ತಿರುವ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿತ್ತು.
ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.