ಬಾರ್ಕೂರು ಚೌಳಿ ಕೆರೆಗೆ ಧುಮುಕಿದ ಕಾರು: ಕುಂದಾಪುರದ ಉದ್ಯಮಿ ಮೃತ್ಯು, ಯುವತಿ ಗಂಭೀರ

ಐತಿಹಾಸಿಕ ಬಾರ್ಕೂರು ಚೌಳಿಕೆರೆಗೆ ತಡೆಗೋಡೆ ಇಲ್ಲದೆ ಇಂಥ ಘಟನೆಗಳು ನಡೆಯುತ್ತಿವೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಬಾರ್ಕೂರು ಕಡೆಯಿಂದ ಸಾಯ್ಬರಕಟ್ಟೆಗೆ ತೆರಳುತ್ತಿದ್ದ ಕಾರೊಂದು  ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಾಗ ಒಬ್ಬರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಬಾರ್ಕೂರು ಚೌಳಿಕೆರೆ ಬಳಿ ನಡೆದಿದೆ.

ಮೃತರನ್ನು ಕುಂದಾಪುರದ ಉದ್ಯಮಿ ವಕ್ವಾಡಿ ಸಂತೋಷ ಶೆಟ್ಟಿ(40) ಎಂದು ಗುರುತಿಸಲಾಗಿದೆ. ಕ್ರೆಟಾ ಕಾರಿನಲ್ಲಿದ್ದ ಯುವತಿ ಶ್ವೇತಾ(23) ಗಂಭೀರ ಸ್ಥಿತಿಯಲ್ಲಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಯಾಳು ಯುವತಿ ಶ್ವೇತಾ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಸಂತೋಷ ಶೆಟ್ಟಿಯವರು ಬೀಜಾಡಿಯಲ್ಲಿ ಶ್ರೀ ಲಕ್ಷ್ಮೀ ಗ್ಲಾಸ್ ಮತ್ತು ಫ್ಲೈ ವುಡ್ ಉದ್ಯಮ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಶ್ವೇತಾ ಅವರ ಅಂಗಡಿಯಲ್ಲಿ ಉದ್ಯೋಗಿ.

ಐತಿಹಾಸಿಕ ಬಾರ್ಕೂರು ಚೌಳಿಕೆರೆಗೆ ತಡೆಗೋಡೆ ಇಲ್ಲದೆ ಇಂಥ ಘಟನೆಗಳು ನಡೆಯುತ್ತಿವೆ. ಒಂದು ಬೈಕ್ ಕೂಡ ಇತ್ತೀಚೆಗೆ ಕೆರೆಗೆ ಬಿದ್ದಿತ್ತು ಎನ್ನಲಾಗಿದೆ.

ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.