ಮಂಗಳೂರು: ಪರವಾನಿಗೆ ಸಹಿತ ಮಾಂಸ ಸಾಗಿಸುತ್ತಿದ್ದಾಗ ಹಲ್ಲೆ, ದುಷ್ಕರ್ಮಿಗಳ ಬಂಧನ

90ಕೆಜಿಯಷ್ಟಿದ್ದ ಮಾಂಸಕ್ಕೆ ಸೀಮೆ ಎಣ್ಣೆ ಸುರಿದಿದ್ದರು. ಈ ಸಂದರ್ಭ ಜನ ಸೇರುವುದನ್ನು ಕಂಡು ಪರಾರಿಯಾಗಿದ್ದಾರೆ ಎಂದು ಕದ್ರಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಅಬ್ದುಲ್ ರಶೀದ್ ಅವರು ಪರವಾನಿಗೆ ಸಹಿತವಾಗಿ ಮಾಂಸ ಸಾಗಿಸುವ ಕೆಲಸ ಮಾಡುತ್ತಿದ್ದಾರೆ. 

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕುದ್ರೋಳಿಯಿಂದ ಕಂಕನಾಡಿ ಮತ್ತು ಜೆಪ್ಪು ಮಾರುಕಟ್ಟೆಗೆ ಪರವಾನಿಗೆ ಸಹಿತವಾಗಿ ಮಾಂಸ ಸಾಗಿಸುವಾಗ ಅಡ್ದಗಟ್ಟಿ ಹಲ್ಲೆಗೈದು, ಮಾಂಸಕ್ಕೆ ಪೆಟ್ರೋಲ್ ಸುರಿದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.

ಸುರತ್ಕಲ್ ಹೊಸಬೆಟ್ಟುವಿನ ದೀಕ್ಷಿತ್ ಕುಮಾರ್(19), ಅತ್ತಾವರ ಸಂತೋಷ ಕುಮಾರ್(31), ಉಳ್ಳಾಲದ ಬಾಲಚಂದ್ರ(28) ಮತ್ತು ರಕ್ಷಿತ್(22), ಕುಚ್ಚಿಗುಡ್ಡೆ ರಾಜು ಪೂಜಾರಿ(19) ಎಂಬವರನ್ನು ಬಂಧಿಸಲಾಗಿದೆ.

ಕುದ್ರೋಳಿಯ ಅಬ್ದುಲ್ ರಶೀದ್(57) ಅವರು ಗೂಡ್ಸ್ ರಿಕ್ಷಾದಲ್ಲಿ ಕಂಕನಾಡಿ ಮಾರುಕಟ್ಟೆಯಲ್ಲಿನ ರಝಾಕ್ ಎಂಬವರ ಬೀಫ್ ಸ್ಟಾಲ್‌ಗೆ ದನದ ಮಾಂಸ ಸಾಗಿಸುತ್ತಿದ್ದಾಗ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ರಶೀದ್ ಅವರಿಗೆ ಹಲ್ಲೆಗೈದಿದ್ದರು.

ಹೈಲ್ಯಾಂಡ್ ಆಸ್ಪತ್ರೆ-ಕಂಕನಾಡಿ ಮಾರ್ಕೆಟ್ ಮಧ್ಯ ಗೂಡ್ಸ್ ರಿಕ್ಷಾ ಟೆಂಪೊ ತಡೆದ ವೇಳೆ, ಅದನ್ನು ಮಗುಚಿ ಹಾಕಿ ಅದಕ್ಕೆ ಹಾನಿಗೊಳಿಸಿದ್ದರು. 90ಕೆಜಿಯಷ್ಟಿದ್ದ ಮಾಂಸಕ್ಕೆ ಸೀಮೆ ಎಣ್ಣೆ ಸುರಿದಿದ್ದರು. ಈ ಸಂದರ್ಭ ಜನ ಸೇರುವುದನ್ನು ಕಂಡು ಪರಾರಿಯಾಗಿದ್ದಾರೆ ಎಂದು ಕದ್ರಿ ಪೊಲೀಸರಿಗೆ ದೂರು ನೀಡಲಾಗಿತ್ತು.

ದುಷ್ಕರ್ಮಿಗಳ ಕೃತ್ಯವನ್ನು ಕಂಕನಾಡಿ ಮಾರುಕಟ್ಟೆ ಸಂಘದ ಅಧ್ಯಕ್ಷ ಅಲಿ ಹಸನ್ ಅವರು ಖಂಡಿಸಿದ್ದಾರೆ.

ಅಬ್ದುಲ್ ರಶೀದ್ ಅವರು ಹತ್ತು ವರ್ಷಗಳಿಂದ ಪ್ರತೀ ದಿನ ಇದೇ ರಸ್ತೆಯಲ್ಲಿ ಪರವಾನಿಗೆ ಸಹಿತವಾಗಿ ಮಾಂಸ ಸಾಗಿಸುವ ಕೆಲಸ ಮಾಡುತ್ತಿದ್ದಾರೆ.

Get real time updates directly on you device, subscribe now.