ಬಾರ್ಕೂರು ಚೌಳಿಕೆರೆಗೆ ಉರುಳಿದ ಕಾರಿನಲ್ಲಿದ್ದ ಯುವತಿಯನ್ನು ಬದುಕಿಸಿದ ಬಾಲಕಿ

'You did an excellent job Namana. Hats off to you': ದಿನೇಶ್ ಕಿಣಿ

ಕೆರೆಗೆ ಉರುಳಿದ ಕಾರಿನಲ್ಲಿದ್ದ ಯುವತಿಗೆ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಮನ ಬಾರ್ಕೂರು(15). ಪ್ರಥಮ ಚಿಕಿತ್ಸೆ ನೀಡಿರದಿದ್ದರೆ ಜೀವಕ್ಕೇ ಅಪಾಯ ಇತ್ತು.

ಕರಾವಳಿ ಕರ್ನಾಟಕ/ಸೋಶಿಯಲ್ ಮೀಡಿಯಾ
ಇವತ್ತು ಮೊಬೈಲ್ ನೋಡುತ್ತಿದ್ದ ನನ್ನ ಹಿರಿ ಮಗಳು ಅದಿತಿ ಓಡಿ ಬಂದು ಹೇಳಿದ್ಲು, ನಿನ್ನೆ ಬಾರ್ಕೂರಿನ ಚೌಳಿಕೆರೆಗೆ ಕಾರು ಉರುಳಿ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಯುವತಿ ಬಚಾವಾಗಿದ್ದಾಳೆ ಮತ್ತು ಅವಳನ್ನು ಬದುಕಿಸಿದ್ದು ತನ್ನ ಕ್ಲಾಸ್‌ಮೇಟ್ ನಮನ ಅಂತ.

ನಮನ

ಸುದ್ದಿ ಕೇಳಿ ಮತ್ತು ಮಗಳ ಸಂಭ್ರಮ ಕಂಡು ನನಗೂ ಖುಷಿಯಾಯ್ತು. ನಮನ ನನಗೂ ಪರಿಚಿತಳೇ. ಲಿಟಲ್‌ರಾಕ್ ಶಾಲೆಯಲ್ಲಿ 10 ತರಗತಿ ಕಲಿಯುತ್ತಿರುವ ನಮನ ಬಹಳ ಚುರುಕಿನ ಹುಡುಗಿ. ಹಿರಿಯ ಉಪನ್ಯಾಸಕಿ, ಎನ್‌ಎಸ್‌ಎಸ್ ಅಧಿಕಾರಿ ಸವಿತಾ ಎರ್ಮಾಳ್ ಮತ್ತು ಕುಮಾರ್ ಅವರ ಸುಪುತ್ರಿ. ಅವರ ಮನೆ ಒಕ್ಕಲಿಗೆ ನಾವು ಹೋಗಿದ್ದೆವು. ಅದೇ ಚೌಳಿಕೆರೆ ಬದಿಯಲ್ಲೇ ಕಾರು ಪಾರ್ಕ್ ಮಾಡಿದ್ದೆವು. ಆ ವಿಷಯ ಬಿಡಿ!

ಕೆರೆಗೆ ಉರುಳಿದ ಕಾರಿನಲ್ಲಿದ್ದು ನೀರು ಕುಡಿದು ಜೀವಚ್ಛವದಂತಾಗಿದ್ದ ಆ ಯುವತಿಗೆ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದೇ ನಮನ ಬಾರ್ಕೂರು ಎಂಬ 15 ವರ್ಷದ ಬಾಲಕಿ.

ಯುವತಿಯ ಉಸಿರಾಟಕ್ಕೆ ತೊಂದರೆಯಾಗಿದ್ದ ನೀರನ್ನು ಜೀವ ಉಳಿಸುವ ಪ್ರಥಮ ಚಿಕಿತ್ಸೆ ಮೂಲಕ ಹೊರ ಹಾಕಿದ ಬಳಿಕವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರೂ ನಮನಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ್ದಲ್ಲದಿದ್ದರೆ ಜೀವಕ್ಕೇ ಅಪಾಯ ಇತ್ತು ಎಂದು ಅವರು ಹೇಳುವಾಗಂತೂ ಎದೆ ಝಲ್ಲೆನ್ನುತ್ತದೆ. ಅಮ್ಮನ ಸಾಂಗತ್ಯದಲ್ಲಿ, ಶಾಲೆಯ ಎನ್‌ಸಿಸಿ ಶಿಬಿರಗಳಲ್ಲಿ ನಮನ ಕಲಿತ ವಿದ್ಯೆ ಒಂದು ಜೀವ ಉಳಿಸಿತು. ಆಕೆಯ ಶಾಲೆಯವರೂ ತಮ್ಮ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಲಿ. ಇದು ಇನ್ನಷ್ಟು ಮಕ್ಕಳಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಪೋಸ್ಟ್ ಬರೆದಿದ್ದೇನೆ.

https://www.facebook.com/dinesh.kini.125

ಬಾಲಕೃಷ್ಣ ಹೆಗ್ಡೆಯವರಿಂದ ಚೌಳಿ ಕೆರೆಗೆ ಬೇಲಿ ನಿರ್ಮಾಣ:

ಅಪಘಾತ ನಡೆದ ಬಾರ್ಕೂರು ಚೌಳಿ ಕೆರೆ ದಂಡೆಗೆ ಬಾರ್ಕೂರು ಬಾಲಕೃಷ್ಣ  ಹೆಗ್ಡೆಯವರು ಸ್ವಂತ ಖರ್ಚಿನಿಂದ ತಾತ್ಕಾಲಿಕ ಬೇಲಿ ನಿರ್ಮಿಸಿದ್ದಾರೆ.

ಉಡುಪಿ ಪೊಲೀಸ್ ಇಲಾಖೆಯ ಸಹಕಾರದಿಂದ ಬಾಲಕೃಷ್ಣ ಹೆಗ್ಡೆಯವರು ಸಕಾಲದಲ್ಲಿ ಸ್ಪಂದಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

 

Get real time updates directly on you device, subscribe now.