ಗುರುರಾಘವೇಂದ್ರ ಬ್ಯಾಂಕ್ ಬಹುಕೋಟಿ ಹಗರಣ: ಸಾಲಗಾರರ ಮನೆಗೆ ಎಸಿಬಿ ದಾಳಿ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಬಸವನಗುಡಿ ಶ್ರೀಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ, ಕೋಟ್ಯಂತರ ಸಾಲ ಪಡೆದು ಮರಳಿಸದ ಮೂವರು ಸಾಲಗಾರರ ಮನೆಗೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಉದ್ಯಮಿ ರಘುನಾಥ್, ಜಸ್ವಂತ್ ರೆಡ್ಡಿ ಮತ್ತು ರಾಮಕೃಷ್ಣ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಯಶವಂತಪುರದ ನಿವಾಸಿಯೊಬ್ಬರು ಬ್ಯಾಂಕ್‌ನಿಂದ 153 ಕೋಟಿ ಸಾಲ ಪಡೆದಿದ್ದರು. ಹೆಚ್‌. ಬಿ. ಆರ್. ಲೇಔಟ್ ನಿವಾಸಿಯೊಬ್ಬರು 139 ಕೋಟಿ, 46 ಕೋಟಿ ಸಾಲ ಪಡೆದ ಮತ್ತೊಬ್ಬರ ಮನೆಯ ಮೇಲೂ ದಾಳಿ ಮಾಡಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಗ್ರಾಹಕರಿಗೆ ಠೇವಣಿ ಹಣ ಮರಳಿಸದೇ ವಂಚಿಸಿರುವ ಆರೋಪದಲ್ಲಿ ಶ್ರೀಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಜೂ.18ರಂದು ಎಸಿಬಿ ಎಫ್‌ಐಆರ್ ದಾಖಲಿಸಿ ಬ್ಯಾಂಕ್ ಸೇರಿದಂತೆ ಐದು ಕಡೆ ದಾಳಿ ನಡೆಸಿತ್ತು.

ಬ್ಯಾಂಕಿನ ಮಾಜಿ ಸಿಇಒ ಮಣೂರು ವಾಸುದೇವ ಮಯ್ಯರ ಚಿಕ್ಕಲ್ಲಸಂದ್ರದಲ್ಲಿನ ಮನೆಗೂ ಅಧಿಕಾರಿಗಳು ಹೋಗಿದ್ದು, ಮನೆಗೆ ಬೀಗ ಹಾಕಲಾಗಿತ್ತು. ಬಸವನಗುಡಿಯಲ್ಲಿರುವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಕೆ.ರಾಮಕೃಷ್ಣ ಅವರ ಮನೆ, ಶಂಕರಪುರದಲ್ಲಿರುವ ಶ್ರೀ ಗುರು ಸಾರ್ವಭೌಮ ಸೌಹಾರ್ದ ಸಹಕಾರ ಸಂಘದ ಕಚೇರಿ, ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಬ್ಯಾಂಕಿನ ಶಾಖೆ, ಕಚೇರಿ ಮೇಲೆ ಏಕಕಾಲದಲ್ಲಿ ಎಸಿಬಿ ಮಿಂಚಿನ ದಾಳಿ ನಡೆಸಿತ್ತು.

ಅಕ್ರಮ ಹಣ ವರ್ಗಾವಣೆ ಮೂಲಕ ಬ್ಯಾಂಕ್ ಅಧಿಕಾರಿಗಳು, ಸಿಬಂದಿ 1400ಕೋಟಿ ರೂ. ಅವ್ಯವಹಾರ ಮಾಡಿದ್ದಾರೆ ಎಂಬ ಸಂಗತಿ ಎಸಿಬಿ ಅಧಿಕಾರಿಗಳ ದಾಳಿ ಸಂದರ್ಭ ಬೆಳಕಿಗೆ ಬಂದಿತ್ತು. ರಿಸರ್ವ್ ಬ್ಯಾಂಕ್ ನಿಯಮ ಉಲ್ಲಂಘಿಸಿ ನಕಲಿ ಠೇವಣಿ ಖಾತೆಗಳು, ಕಾಲ್ಪನಿಕ ಗ್ರಾಹಕರಿಗೆ ಸಾಲ ಮಂಜೂರಾತಿ ಇತ್ಯಾದಿ ಅಕ್ರಮಗಳೂ ದಾಳಿಯಲ್ಲಿ ಬಯಲಾಗಿದ್ದವು.

ರಿಸರ್ವ್ ಬ್ಯಾಂಕ್ ನೀತಿ ಅನ್ವಯ ಅನುತ್ಪಾದಕ ಸಾಲ(ಎನ್.ಪಿ.ಎ) ಶೇ.4ಮೀರ ಕೂಡದು. ಈ ಬ್ಯಾಂಕಿನಲ್ಲಿ ಶೇ.25ರಿಂದ 30ರಷ್ಟಿತ್ತು ಎಂದು ಎಸಿಬಿ ಅಧಿಕಾರಿ ಹೇಳಿದ್ದಾರೆ.

ಬ್ಯಾಂಕ್ ಅವ್ಯವಹಾರದ ಬಗ್ಗೆ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದನ್ನು ಆಧರಿಸಿ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ.

ಬ್ಯಾಂಕ್ ಆಡಳಿತ ಮಂಡಳಿ ಸೂಪರ್ಸೀಡ್ ಮಾಡಿರುವ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರು ಆಡಳಿತಾಧಿಕಾರಿ ನೇಮಕ ಮಾಡಿದ್ದರು.

 

Get real time updates directly on you device, subscribe now.