ಪೌರತ್ವ ಕಾಯ್ದೆ ವಿರೋಧಿ ಹೋರಾಟಗಾರ್ತಿ ಸಪೂರ ಝರ್ಗರ್ಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್
ಎಂ.ಫಿಲ್ ವಿದ್ಯಾರ್ಥಿನಿಯಾಗಿರುವ ಸಪೂರ ಅವರು ಐದು ತಿಂಗಳ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಮಾನವೀಯತೆ ನೆಲೆಯಲ್ಲಿ ಜಾಮೀನು.
ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಜಾಮಿಯಾ ಮಿಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ, ಗರ್ಭಿಣಿ ಯುವತಿ ಸಪೂರ ಝರ್ಗರ್ ಅವರಿಗೆ ಜಾಮೀನು ನೀಡುವ ಬಗ್ಗೆ ಮಾನವೀಯ ನೆಲೆಯಲ್ಲಿ ಪೊಲೀಸರು ಆಕ್ಷೇಪಿಸದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಬಂಧಿಸಲ್ಪಟ್ಟಿರುವ ಸಫೂರ ಝರ್ಗರ್ ಅವರಿಗೆ ಜಾಮೀನು ನೀಡುವ ಸಂದರ್ಭ ದೆಹಲಿ ಬಿಟ್ಟು ತೆರಳದಂತೆ ಸೂಚಿಸಲಾಗಿದೆ. ತನಿಖೆಯ ಹಾದಿ ತಪ್ಪಿಸುವ ಯಾವ ಚಟುವಟಿಕೆಯನ್ನೂ ಮಾಡಬಾರದು, ಪ್ರತೀ ಹದಿನೈದು ದಿನಕ್ಕೊಮ್ಮೆ ತನಿಖಾಧಿಕಾರಿಯೊಂದಿಗೆ ಫೋನ್ ಸಂಪರ್ಕದಲ್ಲಿರಬೇಕು, ಹತ್ತು ಸಾವಿರ ರೂ.ಗಳ ವಯಕ್ತಿಕ ಭದ್ರತೆ ಒದಗಿಸಬೇಕು ಎಂಬ ಷರತ್ತುಗಳ ಅನ್ವಯ ಜಾಮೀನು ನೀಡಲಾಗಿದೆ.
ಸಿಎಎ ವಿರೋಧಿ ಹೋರಾಟಗಾರ್ತಿ ಸಪೂರ ಝರ್ಗರ್ ಅವರನ್ನು ಎಪ್ರಿಲ್10ರಂದು ಬಂಧಿಸಲಾಗಿತ್ತು. ಎಪ್ರಿಲ್18ರಂದು ಮೊದಲ ಜಾಮೀನು ಅರ್ಜಿ ಸಲ್ಲಿಸಿದಾಗ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆ ಹೇರಿರಲಿಲ್ಲ. ಕಾಯ್ದೆ ಹೇರಿದ ಬಳಿಕ ಸಪೂರ ಅವರ ಮೊದಲ ಅಪೀಲು ಎ.21ರಂದು ತಿರಸ್ಕರಿಸಲಾಗಿತ್ತು. ಒಟ್ಟು ಮೂರು ಬಾರಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.
ನಾಲ್ಕನೇ ಬಾರಿ ಸಪೂರ ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು.
ಎಂ.ಫಿಲ್ ವಿದ್ಯಾರ್ಥಿನಿಯಾಗಿರುವ ಸಪೂರ ಅವರು ಐದು ತಿಂಗಳ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಮಾನವೀಯತೆ ನೆಲೆಯಲ್ಲಿ ಅವರಿಗೆ ಜಾಮೀನು ನೀಡುವುದನ್ನು ದೆಹಲಿ ಪೊಲೀಸ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿರೋಧಿಸಿರಲಿಲ್ಲ.