ತಿಂಗಳ ಒಳಗೆ ಸರಕಾರಿ ಬಂಗಲೆ ಬಿಡಿ: ಪ್ರಿಯಾಂಕ ಗಾಂಧಿಗೆ ಕೇಂದ್ರ ನೋಟೀಸ್

ಬಂಗಲೆ ಖಾಲಿ ಮಾಡದಿದ್ದರೆ ಆಗಸ್ಟ್‌ 1ರ ನಂತರ ಎಷ್ಟು ದಿನ ಬಂಗಲೆಯಲ್ಲಿ ತಂಗಿರುತ್ತಾರೋ ಹಾನಿ ಶುಲ್ಕ ಹಾಗೂ ದಂಡ ರೂಪದಲ್ಲಿ ಬಾಡಿಗೆ ಪಾವತಿಸಿ.

ಕಾಂಗ್ರೆಸ್ ಬಿಜೆಪಿಯು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಹೊಂದಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಲೋಧಿ ಎಸ್ಟೇಟ್‌ನಲ್ಲಿ ಸರ್ಕಾರದಿಂದ ನೀಡಲಾಗಿರುವ ಮನೆಯನ್ನು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಪ್ರಿಯಾಂಕ ಗಾಂಧಿಯವರಿಗೆ ಇಪ್ಪತ್ತ್ಮೂರು ವರ್ಷ ಹಿಂದೆ ಈ ಬಂಗಲೆ ಹಂಚಿಕೆ ಮಾಡಲಾಗಿತ್ತು.

ಎಸ್‌ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿರುವುದರಿಂದ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಸರಕಾರದಿಂದ ನೀಡಲಾಗಿರುವ ಬಂಗಲೆಯನ್ನು ಆಗಸ್ಟ್ 1ರೊಳಗೆ ಖಾಲಿ ಮಾಡಬೇಕು ಎಂದು ಗೃಹ ನಿರ್ಮಾಣ ಸಚಿವಾಲಯ ಆದೇಶಿಸಿದೆ. ಬಂಗಲೆ ಖಾಲಿ ಮಾಡದಿದ್ದರೆ ಆಗಸ್ಟ್‌ 1ರ ನಂತರ ಎಷ್ಟು ದಿನ ಬಂಗಲೆಯಲ್ಲಿ ತಂಗಿರುತ್ತಾರೋ ಹಾನಿ ಶುಲ್ಕ ಹಾಗೂ ದಂಡ ರೂಪದಲ್ಲಿ ಬಾಡಿಗೆ ಪಾವತಿಸಿ ಎಂದು ಕೇಂದ್ರ ಸರಕಾರ ಆದೇಶದಲ್ಲಿ ತಿಳಿಸಿದೆ.

ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ಹಂತದ ಭದ್ರತೆ ಕಳೆದ ವರ್ಷ ಸರ್ಕಾರ ಹಿಂಪಡೆದುಕೊಂಡು ಝಡ್ ಪ್ಲಸ್ ಸೆಕ್ಯೂರಿಟಿ ನೀಡಿತ್ತು. ಝಡ್ ಪ್ಲಸ್ ಸೆಕ್ಯೂರಿಟಿ ಹೊಂದಿದವರಿಗೆ ಸರ್ಕಾರಿ ಬಂಗಲೆ ಕೊಡುವ ಅವಕಾಶ ಇರುವುದಿಲ್ಲ. ಕ್ಯಾಬಿನೆಟ್ ವಸತಿ ಸಮಿತಿಯು ವಿನಾಯಿತಿ ನೀಡಲು ಅಂಗೀಕರಿಸಿದರೆ ಮಾತ್ರ ಝಡ್ ಪ್ಲಸ್ ಭದ್ರತೆ ಹೊಂದಿದವರಿಗೆ ಸರ್ಕಾರಿ ಬಂಗಲೆಯ ಸೌಲಭ್ಯ ಇರುತ್ತದೆ.

ಡಿಸೆಂಬರ್3, 2019ರಂದು ಸಂಸತ್ತಿನಲ್ಲಿ ಎಸ್ಪಿಜಿ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಲಾಗಿದ್ದು, ಅದರಂತೆ ಜುಲೈ1ರಂದು ನೋಟೀಸ್ ನೀಡಲಾಗಿದೆ. ಗಾಂಧಿ ಕುಟುಂಬ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನೂ ರದ್ದುಪಡಿಸಲಾಗಿತ್ತು. ಕಾಂಗ್ರೆಸ್ ಬಿಜೆಪಿಯು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದೆ.

 

 

Get real time updates directly on you device, subscribe now.