‘ಕೊರೋನಾ ಲಸಿಕೆಯ ಅಗತ್ಯವೇ ಹೆಚ್ಚಿನ ಜನರಿಗಿಲ್ಲ, ಸಣ್ಣಪುಟ್ಟ ಕಾಯಿಲೆಗಳಂತೆಯೇ ಕೊರೋನಾ ಹೋಗಲಿದೆ’

ಕೆಲವೇ ದಿನಗಳಲ್ಲಿ ಲಸಿಕೆ ಮಾರುಕಟ್ಟೆಗೆ ಬರಲಿದೆ. ಅಷ್ಟರಲ್ಲೇ ಹೆಚ್ಚಿನ ಜನರಲ್ಲಿ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಲಸಿಕೆಯ ಅಗತ್ಯವೇ ಇರುವುದಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.

ಲಾಕ್ ಡೌನ್ ಒಂದರಿಂದಲೇ ಕೊರೋನಾ ಸೋಂಕು ನಿಯಂತ್ರಣವಾಗದು. ಸರಿಯಾದ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಇಲ್ಲದಿದ್ದರೆ ಲಾಕ್ ಡೌನ್ ಯಶಸ್ವಿಯಾದ ದೇಶಗಳಲ್ಲೂ ಕೊರೋನಾ ನಿಯಂತ್ರಣಕ್ಕೆ ಬಾರದು.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಕೊರೋನಾ, ಕೊರೋನಾ, ಲಾಕ್‌ಡೌನ್, ಸೀಲ್ ಡೌನ್ ಎಂದು ನಿದ್ರೆ ಕಣ್ಣಲ್ಲೂ ಹೇಳುವಷ್ಟು ಭೀತರಾಗಿರುವ ಕೆಲವರಿಗೆ ನೆಮ್ಮದಿ ನೀಡಬಹುದಾದಂಥಹ ಸುದ್ದಿಯನ್ನು ಬ್ರಿಟನ್ ಆಕ್ಸ್‌ಫರ್ಡ್ ವಿವಿ ಸಾಂಕ್ರಾಮಿಕ ರೋಗ ಪರಿಣತರು ನೀಡಿದ್ದಾರೆ.

ಹೆಚ್ಚಿನ ಜನರಿಗೆ ಕೋವಿಡ್19 ಲಸಿಕೆಯ ಅಗತ್ಯವೇ ಇಲ್ಲ. ಈ ವೈರಸ್ ನೈಸರ್ಗಿಕವಾಗಿಯೇ ಹೇಗೆ ಬಂದಿದೆಯೋ ಹಾಗೆಯೇ ನಾಶಗೊಳ್ಳುತ್ತದೆ ಎಂದು ಆಕ್ಸ್‌ಫರ್ಡ್ ಪ್ರಾಧ್ಯಾಪಕಿ ಮತ್ತು ಸಾಂಕ್ರಾಮಿಕ ರೋಗ ಪರಿಣತರಾದ ಸುನೇತ್ರ ಗುಪ್ತಾ ಹೇಳಿದ್ದಾರೆ.

ಅಗತ್ಯಕ್ಕಿಂತ ಹೆಚ್ಚಾಗಿಯೇ ಜನರು ಕೊರೊನಾ ವೈರಸ್ ಬಗ್ಗೆ ಭೀತರಾಗಿದ್ದಾರೆ. ಇದು ಸಾಮಾನ್ಯ ಶೀತಜ್ವರದಂತೆ, ಉಳಿದ ಸಣ್ಣ ಕಾಯಿಲೆಗಳಂತೆ ಬಂದು ಹೋಗುತ್ತದೆ. ಇದು ಉಳಿದ ಕಾಯಿಲೆಗಳಂತೆಯೇ ಜೀವನದ ಭಾಗವಾಗಲಿದೆ ಎಂದು ಅವರು ಹೇಳಿದ್ದಾರೆ.

‘ಪ್ರೊಫೆಸರ್ ರಿಒಪನ್’ ಎಂದು ಟ್ಯಾಗ್ ಆಗಿರುವ ವಿಡಿಯೋದಲ್ಲಿ ಕೊರೊನಾ ಸೋಂಕು ಮತ್ತು ಲಾಕ್ ಡೌನ್ ಪರಿಣಾಮಗಳ ಬಗ್ಗೆ ಸುನೇತ್ರ ಗುಪ್ತಾ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯೊಂದಿಗೆ ಮಾತಾಡಿದ್ದಾರೆ. ವಿಷಮಶೀತ ಜ್ವರದಿಂದ ಸಾಯುವ ಪ್ರಮಾಣಕ್ಕಿಂತಲೂ ಕೊರೋನಾ ಸೋಂಕಿನಿಂದ ಸಾಯುವವರ ಪ್ರಮಾಣ ಕಡಿಮೆಯಾಗಲಿದೆ ಎಂದು ಭಾರತೀಯ ಮೂಲದ ಸುನೇತ್ರ ಗುಪ್ತಾ ಹೇಳಿದ್ದಾರೆ.

ಕೊರೊನಾದ ಇತಿಹಾಸ ತಿಳಿದಿರುವ ಕಾರಣ ಅದಕ್ಕೆ ಲಸಿಕೆ ಕಂಡುಹಿಡಿಯುವುದು ಕಷ್ಟವಲ್ಲ. ಕೆಲವೇ ದಿನಗಳಲ್ಲಿ ಲಸಿಕೆ ಮಾರುಕಟ್ಟೆಗೆ ಬರಲಿದೆ. ಅಷ್ಟರಲ್ಲೇ ಹೆಚ್ಚಿನ ಜನರಲ್ಲಿ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಲಸಿಕೆಯ ಅಗತ್ಯವೇ ಇರುವುದಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.

ರೋಗ ನಿರೋಧಕ ಶಕ್ತಿ ಚೆನ್ನಾಗಿರುವ ಮಂದಿ, ಯುವಕರು, ಆರೋಗ್ಯವಂತ ಜನರು ಕೊರೋನ ಸೋಂಕಿಗೆ ಹೆದರುವ ಅವಶ್ಯಕತೆಯೇ ಇಲ್ಲ ಎಂದಿದ್ದಾರೆ. ಲಾಕ್ ಡೌನ್ ಕೊರೋನವನ್ನು ನಿಯಂತ್ರಿಸುವಲ್ಲಿ ದೀರ್ಘಕಾಲೀನ ಮತ್ತು ಪರಿಣಾಮಕಾರಿ ಪರಿಹಾರ ಕ್ರಮವಲ್ಲ ಎಂದು ಅವರು ಹೇಳಿದ್ದು, ಲಾಕ್ ಡೌನ್ ಒಂದರಿಂದಲೇ ಕೊರೋನಾ ಸೋಂಕು ನಿಯಂತ್ರಣವಾಗದು. ಸರಿಯಾದ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಇಲ್ಲದಿದ್ದರೆ ಲಾಕ್ ಡೌನ್ ಯಶಸ್ವಿಯಾದ ದೇಶಗಳಲ್ಲೂ ಕೊರೋನಾ ನಿಯಂತ್ರಣಕ್ಕೆ ಬಾರದು. ಈಗಾಗಲೇ ಅನೇಕ ದೇಶಗಳಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಿಯೂ ಕೊರೋನಾ ಸೋಂಕು ದಿನೇ ದಿನೇ ಉಲ್ಬಣಿಸಿರುವ ಅನೇಕ ಉದಾಹರಣೆಗಳಿವೆ ಎಂದು ಅವರು ಹೇಳಿದ್ದಾರೆ.

Get real time updates directly on you device, subscribe now.