ಕುವೈಟ್ ಕನ್ನಡಿಗರನ್ನು ಆತಂಕಕ್ಕೀಡುಮಾಡಿದ ರಾಜ್ಯ ಸರಕಾರದ ಆದೇಶ

ವಿಮಾನದಲ್ಲಿ ಬರುವವರಿಗೆ ಕೋವಿಡ್ ನೆಗೆಟಿವ್‌ ವರದಿ ಕಡ್ಡಾಯ ಎಂದು ಕರ್ನಾಟಕ ಸರಕಾರ ಪರಿಷ್ಕೃತ ಆದೇಶ.

ಕೇರಳ ಸರಕಾರವು ಕುವೈಟ್‌ನಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಪ್ರಮಾಣಪತ್ರ ನಿಯಮದಿಂದ ವಿನಾಯತಿ ನೀಡಿರುವುದನ್ನು ಕರ್ನಾಟಕ ಅನುಸರಿಸಬೇಕು ಎಂದು ಕುವೈಟ್ ಕನ್ನಡಿಗರ ಬೇಡಿಕೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕುವೈಟ್ ದೇಶದಿಂದ ಬರಲು ಬಯಸಿರುವ ಕನ್ನಡಿಗರಿಗೆ ಕರ್ನಾಟಕ ಸರಕಾರದ ಆದೇಶವೊಂದು ದೊಡ್ಡ ತಡೆಯಾಗಿ ಪರಿಣಮಿಸಿದೆ.

ವಿಮಾನದಲ್ಲಿ ಬರುವವರಿಗೆ ಕೋವಿಡ್  ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಕಡ್ಡಾಯ ಎಂದು ಕರ್ನಾಟಕ ಸರಕಾರ ಪರಿಷ್ಕೃತ ಆದೇಶ ಹೊರಡಿಸಿರುವುದೇ ಇದಕ್ಕೆ ಕಾರಣ.

ಕುವೈಟ್ ನಲ್ಲಿ ಈ ರೀತಿ ಪರೀಕ್ಷಾ ವ್ಯವಸ್ಥೆ ಇಲ್ಲದಿರುವಾಗ ಕೋವಿಡ್ ನೆಗೆಟಿವ್ ವರದಿ ಹೇಗೆ ತರುವುದು ಎಂಬುದು ಕುವೈಟ್ ಕನ್ನಡಿಗರ ಚಿಂತೆಗೆ ಕಾರಣವಾಗಿದೆ.  ಕೇರಳ ಸರಕಾರವು ಕುವೈಟ್‌ನಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಪ್ರಮಾಣಪತ್ರ ನಿಯಮದಿಂದ ವಿನಾಯತಿ ನೀಡಿರುವುದನ್ನು ಕರ್ನಾಟಕವೂ ಅನುಸರಿಸಬೇಕು ಎಂಬುದು ಕುವೈಟ್ ಕನ್ನಡಿಗರ ಬೇಡಿಕೆಯಾಗಿದೆ. ಈ ಬಗ್ಗೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರ ಗಮನ ಸೆಳೆಯಲಾಗಿದೆ.

ರದ್ದುಗೊಂಡಿದ್ದ ಕುವೈಟ್‌-ಮಂಗಳೂರು ಖಾಸಗಿ ವಿಮಾನವು ಕುವೈಟ್-ಕೇರಳ ಮುಸ್ಲಿಂ ಸಂಘಟನೆಯವರ ವಿಶೇಷ ಪರಿಶ್ರಮದಿಂದಾಗಿ ರಾಜ್ಯ ಸರಕಾರದ ಅನುಮತಿಯೊಂದಿಗೆ ಇದೀಗ  ಜು. 4 ರಂದು ಕರಾವಳಿ ಕನ್ನಡಿಗರನ್ನು ಕರೆತರಲಿದೆ.

ಕುವೈಟ್‌ ಏರ್‌ವೆಸ್‌ ವಿಮಾನದ ಪ್ರಯಾಣಿಕರನ್ನು ಹೊರತುಪಡಿಸಿ, ಕುವೈಟ್‌ನಿಂದ ಹೊರದೇಶಗಳಿಗೆ ಇತರ ವಿಮಾನಗಳಲ್ಲಿ ಪ್ರಯಾಣಿಸುವ ಜನರಿಗೆ ಕೊರೋನಾ ಪರೀಕ್ಷೆ ಮಾಡಿ ಕಳಿಸುವುದಿಲ್ಲ.

ಭಾರತ ಸರಕಾರದ ‘ವಂದೇ ಮಾತರಂ’ ಮಿಷನ್ ಅನ್ವಯ ಕರಾವಳಿ ಕನ್ನಡಿಗರನ್ನು ಕರೆತರಲು ಭಾರೀ ಉತ್ಸಾಹವನ್ನು ಭಾರತ ಸರಕಾರ ತೋರಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ ಖಾಸಗಿ ಬಾಡಿಗೆ ವಿಮಾನಗಳಲ್ಲಿ ಬರುತ್ತಿರುವ ಕನ್ನಡಿಗರಿಗೆ ಸರಕಾರದ ಕೋವಿಡ್ ನಿಯಮ ಇನ್ನಷ್ಟು ಸಂಕಷ್ಟದಲ್ಲಿ ನೂಕುವಂತಿದೆ ಎಂದು ಕುವೈಟ್ ಕನ್ನಡಿಗರು ಆತಂಕ ವ್ಯಕ್ತಪಡಿಸಿರುವುದು ವರದಿಯಾಗಿದೆ.

 

Get real time updates directly on you device, subscribe now.