ಕೋವೀಡ್ ಪ್ರಮಾಣ ಪತ್ರಕ್ಕೆ ವಿನಾಯ್ತಿ: ಕುವೈಟ್-ಮಂಗಳೂರು ಬಾಡಿಗೆ ವಿಮಾನಕ್ಕೆ ಗ್ರೀನ್ ಸಿಗ್ನಲ್
ಕೊನೆಗೂ ರಾಜ್ಯ ಸರಕಾರ ಕೇರಳ ಸರಕಾರದ ಮಾದರಿಯಲ್ಲಿ ಗಲ್ಫ್ ದೇಶಗಳಿಂದ ಬರುವ ಕನ್ನಡಿಗರಿಗೆ ಕೋವಿಡ್ ಪರೀಕ್ಷೆಯಿಂದ ವಿನಾಯ್ತಿ ನೀಡಿದೆ.
ಮಂಜೇಶ್ವರ ಮೋಹನದಾಸ್ ಕಾಮತ್, ಮಾಜಿ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಅಕ್ಬರ್ ಟ್ರಾವೆಲ್ಸ್, ಕುವೈಟ್-ಕೇರಳ ಮುಸ್ಲಿಂ ಅಸೋಶಿಯೇಷನ್ ಕರ್ನಾಟಕ ಶಾಖೆ ವಿಶೇಷ ಪ್ರಯತ್ನ.
ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೊನೆಗೂ ರಾಜ್ಯ ಸರಕಾರ ಕುವೈಟ್ ಕನ್ನಡಿಗರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ನಿಯಮದಿಂದ ವಿನಾಯ್ತಿ ನೀಡಿದ್ದರಿಂದ ಕುವೈಟ್ ಕನ್ನಡಿಗರು ಜುಲೈ4ರಂದು ಮಂಗಳೂರಿಗೆ ಚಾರ್ಟರ್ಡ್ ಫ್ಲೈಟ್ನಲ್ಲಿ ಬರಲಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅವರು ರಾಜ್ಯ ಸರಕಾರಕ್ಕೆ ಕುವೈಟ್ ಕನ್ನಡಿಗರ ಸಮಸ್ಯೆಯನ್ನು ಮನವರಿಕೆ ಮಾಡುವುದರಲ್ಲಿ ಯಶಸ್ಸು ಕಂಡಿರುವುದರ ಫಲವಾಗಿ ಕುವೈಟ್ ಕನ್ನಡಿಗರು ಒಂದಿಷ್ಟು ಸಮಾಧಾನ ಪಡುವಂತಾಗಿದೆ.
ಕುವೈಟ್ನಲ್ಲಿರುವ ಇಂಜಿನಿಯರ್ ಮಂಜೇಶ್ವರ ಮೋಹನದಾಸ್ ಕಾಮತ್ ಅವರ ವಿಶೇಷ ಪ್ರಯತ್ನದಿಂದ ಜೂ.26ರಂದು ಕುವೈಟ್ ಕನ್ನಡಿಗರು ಮಂಗಳೂರಿಗೆ ಬರಲು ಸಿದ್ದರಾಗಿದ್ದರು. ಆದರೆ ಕೊನೆಕ್ಷಣ ಸರಕಾರ ಅನುಮತಿ ನಿರಾಕರಿಸಿದ ಕಾರಣ ವಿಮಾನ ಯಾನ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಊರಿಗೆ ಬರುವ ಸಿದ್ದತೆಯಲ್ಲಿ ಮುಂಗಡ ಬಿಕಿಂಗ್ ಮಾಡಿ ಕುವೈಟ್ನಲ್ಲಿ ಬಾಡಿಗೆ ಮನೆ ತೊರೆದಿದ್ದ 164ಕನ್ನಡಿಗರು ಅತೀವ ಕಷ್ಟಕ್ಕೆ ಸಿಲುಕಿದ್ದರು.
ಜು.4ಕ್ಕೆ ಮಂಜೇಶ್ವರ ಮೋಹನದಾಸ್ ಕಾಮತ್ ಅವರ ಸತತ ಪ್ರಯತ್ನದಿಂದ ಮತ್ತೆ ವಿಮಾನ ನಿಗದಿಯಾದರೂ ಕರ್ನಾಟಕಕ್ಕೆ ಬರುವ ಗಲ್ಫ್ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಸರಕಾರ ಸೂಚಿಸಿದ್ದರಿಂದ ಮತ್ತೊಮ್ಮೆ ಕನ್ನಡಿಗರು ಕಷ್ಟಕ್ಕೆ ಸಿಲುಕಿದ್ದರು.
ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಅವರಿಗೆ ಮತ್ತೆ ಕುವೈಟ್ ಕನ್ನಡಿಗರು ಮನವಿ ಸಲ್ಲಿಸಿದ್ದರು. ಅಕ್ಬರ್ ಟ್ರಾವೆಲ್ಸ್, ಕುವೈಟ್-ಕೇರಳ ಮುಸ್ಲಿಂ ಅಸೋಶಿಯೇಷನ್ ಕರ್ನಾಟಕ ಶಾಖೆ ಕೂಡ ಈ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿದ್ದು, ಕೊನೆಗೂ ರಾಜ್ಯ ಸರಕಾರ ಕೇರಳ ಸರಕಾರದ ಮಾದರಿಯಲ್ಲಿ ಗಲ್ಫ್ ದೇಶಗಳಿಂದ ಬರುವ ಕನ್ನಡಿಗರಿಗೆ ಕೋವಿಡ್ ಪರೀಕ್ಷೆಯಿಂದ ವಿನಾಯ್ತಿ ನೀಡಿದೆ.
ಜು.4ರಂದು ಬೆಳಿಗ್ಗೆ 11ಕ್ಕೆ ಕುವೈಟ್-ಮಂಗಳೂರು ಇಂಡಿಗೊ ಚಾರ್ಟರ್ಡ್ ಫ್ಲೈಟ್ 164ಪ್ರಯಾಣಿಕರೊಂದಿಗೆ ರಾತ್ರಿ8:55ಕ್ಕೆ ಮಂಗಳೂರಿಗೆ ಬರಲಿದ್ದು, ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ.
ಜು.8,11,18ರಂದು ಕೇಂದ್ರ ಸರಕಾರದ ‘ವಂದೇ ಭಾರತ್’ ಮಿಷನ್ ಅನ್ವಯ ವಿಮಾನಗಳು ಕುವೈಟ್ನಿಂದ ಬೆಂಗಳೂರಿಗೆ ತಲುಪಲಿವೆ ಎಂದು ತಿಳಿದುಬಂದಿದೆ.