ಗುರುಪುರ ಗುಡ್ಡ ಕುಸಿತ ಪ್ರಕರಣ: ಮೃತ ಮಕ್ಕಳ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಮನೆಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದು, ಬೋಡಂತಿಲ್ಲ ಗ್ರಾಮದ ಸರ್ವೆ ನಂ. 102ರಲ್ಲಿ ಮನೆಗಳನ್ನು ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಘಟನೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನ ಸೆಳೆದಿದ್ದರು.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ನಗರದ ಹೊರವಲಯದ ಗುರುಪುರ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಸಿಎಂ ಯಡಿಯೂರಪ್ಪ ತಲಾ 5ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ.

ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್, ಪೊಲೀಸ್ ಮತ್ತು ಜಿಲ್ಲಾಡಳಿತದ ಪ್ರಯತ್ನ ಫಲ ನೀಡದೇ ಇಬ್ಬರು ಮಕ್ಕಳು ಮೃತಪಟ್ಟಿರುವುದಕ್ಕೆ ಸಿಎಂ ತೀವೃ ವಿಷಾದ ವ್ಯಕ್ತಪಡಿಸಿದ್ದಾರೆ. ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುವುದಾಗಿ ಸಿಎಂ ಹೇಳಿದ್ದಾರೆ.

ಪರಿಹಾರ ಧನ ನೀಡಲು ದ.ಕ. ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. 19ಮನೆಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದು, ಬೋಡಂತಿಲ್ಲ ಗ್ರಾಮದ ಸರ್ವೆ ನಂ. 102ರಲ್ಲಿ ಮನೆಗಳನ್ನು ನಿರ್ಮಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

19 ಮನೆಗಳನ್ನು ತೆರವುಗೊಳಿಸಿ 118ಜನರನ್ನು ಸರಕಾರಿ ಶಾಲೆ, ಪಂಚಾಯತ್ ಹಾಲ್ ಮುಂತಾದ ಕಡೆಗೆ ಸ್ಥಳಾಂತರಿಸಲಾಗಿದೆ. ಉಳಿದ ಅರವತ್ತು ಮನೆಗಳ ಸದಸ್ಯರನ್ನು ಕೂಡಾ ಸ್ಥಳಾಂತರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಮಣ್ಣಿನಲ್ಲಿ ಸಿಲುಕಿ ಬಾಲಕ ಸಫ್ವಾನ್(16) ಮತ್ತು ಬಾಲಕಿ ಸಹಾಲಾ(10) ಮೃತಪಟ್ಟಿದ್ದರು.

ಗುಡ್ಡದ ಮಣ್ಣು ಮಧ್ಯಾಹ್ನ 12:30 ಸುಮಾರಿಗೆ ಕುಸಿದು ಬಿದ್ದಾಗ ಮನೆಯಲ್ಲಿದ್ದ ಮೂವರು ಓಡಿ ಹೊರಗೆ ಬಂದಿದ್ದು, ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ನಾಲ್ಕು ಗಂಟೆಗಳ ಬಳಿಕ ಮಕ್ಕಳನ್ನು ಪತ್ತೆ ಮಾಡಲಾಗಿದ್ದು, ಮೃತಪಟ್ಟಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಘಟನೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನ ಸೆಳೆದಿದ್ದರು.

 

Get real time updates directly on you device, subscribe now.