ಕುವೈಟ್: ಕುಂದಾಪುರದ ಉದ್ಯಮಿ ಕೊರೋನಾ ಸೋಂಕಿನಿಂದ ನಿಧನ
ಮೊಹ್ಮದ್ ಸಯ್ಯದ್ ಅವರು ಕ್ರೀಡಾಪಟುವಾಗಿ, ತರಬೇತುದಾರರಾಗಿ ಅಪಾರ ಅಭಿಮಾನಿಗಳು-ಸ್ನೇಹಿತರನ್ನು ಹೊಂದಿದ್ದು, ಅವರ ನಿಧನಕ್ಕೆ ಹಲವು ಮಂದಿ ಕಂಬನಿ ಮಿಡಿದಿದ್ದಾರೆ.
ಭಂಡಾರ್ಕಾಸ್ ಕಾಲೇಜಿನ ಮಾಜಿ ಅಥ್ಲೆಟಿಕ್ ಛಾಂಪಿಯನ್, ಉತ್ತಮ ವಾಲಿಬಾಲ್, ಕಬಡ್ಡಿ ಪಟುವಾಗಿ ಇಲ್ಲಿನ ಖ್ಯಾತ ಕ್ರೀಡಾ ಸಂಸ್ಥೆ ‘ಗೋಲ್ಡನ್ ಮಿಲ್ಲರ್’ ಮುಂತಾದ ಹಲವು ಸಂಸ್ಥೆಗಳೊಂದಿಗೆ ಕ್ರೀಡಾ ನಂಟು ಹೊಂದಿದ್ದರು.
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಇಲ್ಲಿನ ಖಾರ್ವಿಕೇರಿ ನಿವಾಸಿ, ಪ್ರಸ್ತುತ ಕುವೈಟ್ ದೇಶದಲ್ಲಿ ನೆಲೆಸಿರುವ ಉದ್ಯಮಿ, ಕ್ರೀಡಾಪಟು ಶೇಖ್ ಮೊಹ್ಮದ್ ಸಯ್ಯದ್(54) ಅವರು ಕುವೈಟ್‌ನಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಸಂಗತಿ ವರದಿಯಾಗಿದೆ.
ಪತ್ನಿ, ಮೂವರು ಪುತ್ರಿಯರು, ತಾಯಿ, ಒಡಹುಟ್ಟಿದವರನ್ನು ಅಗಲಿದ್ದಾರೆ.
ಕುಂದಾಪುರದಲ್ಲಿ ಹಳೆ ಬಸ್ ನಿಲ್ದಾಣ ಬಳಿ ಇವರ ಕುಟುಂಬದವರು ‘ಶೂ ಲ್ಯಾಂಡ್’ ಪಾದರಕ್ಷೆ ಮಳಿಗೆ ಹೊಂದಿದ್ದು, ಮೊಹ್ಮದ್ ಸಯ್ಯದ್ ಅವರು ಇಲ್ಲಿನ ಜನರಿಗೆ ಚಿರಪರಿಚಿತರಾಗಿದ್ದರು.
ಭಂಡಾರ್ಕಾಸ್ ಕಾಲೇಜಿನ ಮಾಜಿ ಅಥ್ಲೆಟಿಕ್ ಛಾಂಪಿಯನ್, ಉತ್ತಮ ವಾಲಿಬಾಲ್, ಕಬಡ್ಡಿ ಪಟುವಾಗಿ ಇಲ್ಲಿನ ಖ್ಯಾತ ಕ್ರೀಡಾ ಸಂಸ್ಥೆ ‘ಗೋಲ್ಡನ್ ಮಿಲ್ಲರ್’ ಮುಂತಾದ ಹಲವು ಸಂಸ್ಥೆಗಳೊಂದಿಗೆ ಕ್ರೀಡಾ ನಂಟು ಹೊಂದಿದ್ದರು.
ಕುವೈಟ್‌ನಲ್ಲಿ ಕೆ. ಆರ್. ಎಚ್. ಕಂಪೆನಿ ಉದ್ಯೋಗಿಯಾಗಿದ್ದ ಸಯ್ಯದ್ ಅವರು ಆರೋಗ್ಯ ಬಿಗಡಾಯಿಸಿದ್ದರಿಂದ ಮೂರು ವಾರಗಳ ಹಿಂದೆ ಕುವೈಟ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಂದರ್ಭ ಕೋವಿಡ್ ಸೋಂಕು ದೃಢಪಟ್ಟಿತ್ತು.
ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಕುವೈಟ್‌ನಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರ ದಫನ್ ಕುವೈಟ್‌ನಲ್ಲೇ ಮಾಡಲಾಗಿದೆ.
ಕುವೈಟ್‌ನಲ್ಲಿ ಉದ್ಯೋಗಿಯಾಗುವ ಮುಂಚೆ ಯು.ಎ.ಇಯಲ್ಲಿಯೂ ಹಲವು ವರ್ಷ ಕೆಲಸ ಮಾಡಿದ್ದ ಮೊಹ್ಮದ್ ಸಯ್ಯದ್ ಅವರು ಕ್ರೀಡಾಪಟುವಾಗಿ, ತರಬೇತುದಾರರಾಗಿ ಕುಂದಾಪುರದಲ್ಲಿ ಅಪಾರ ಅಭಿಮಾನಿಗಳು-ಸ್ನೇಹಿತರನ್ನು ಹೊಂದಿದ್ದು, ಅವರ ನಿಧನಕ್ಕೆ ಹಲವು ಮಂದಿ ಕಂಬನಿ ಮಿಡಿದಿದ್ದಾರೆ.