ಕರಾವಳಿ ಕರ್ನಾಟಕ ವರದಿ
ಕಾಪು: ಮದ್ಯದ ಅಮಲಿನಲ್ಲಿ ಸ್ನೇಹಿತನನ್ನು ಕೊಲೆಗೈದು ಮನೆಯ ಅಂಗಳದಲ್ಲೇ ಸುಡಲು ಯತ್ನಿಸಿದ ಘಟನೆ ಪುಂಚಲಕಾಡು ಎಂಬಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎರ್ಮಾಳು ಹೇಮಂತ ಪೂಜಾರಿ(45) ಕೊಲೆಯಾಗಿದ್ದು, ಪುಂಚಲಕಾಡುವಿನ ಆಲ್ಬರ್ಟ್ ಡಿಸೋಜಾ(50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕೊಲೆ ನಡೆದಿದ್ದು, ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆಯಾದ ಹೇಮಂತ ಮತ್ತು ಆರೋಪಿ ಆಲ್ಬರ್ಟ್ ಸ್ನೇಹಿತರಾಗಿದ್ದು, ಕಾಪು ಬಾರ್ ಒಂದರಲ್ಲಿ ಮದ್ಯ ಸೇವಿಸಿದ ಬಳಿಕ ಪುಂಚಾಲಕಾಡಿನಲ್ಲಿರುವ ಆಲ್ಬರ್ಟ್ ಮನೆಗೆ ತೆರಳಿದ್ದರು. ಇಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಜಗಳ ಮಾಡಿಕೊಂಡಿದ್ದು, ಆಲ್ಬರ್ಟ್ ಡಿ’ಸೋಜ ಕಟ್ಟಿಗೆಯಿಂದ ಹೊಡೆದಾಗ ಹೇಮಂತ ಪೂಜಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಂಜೆ ಆಲ್ಬರ್ಟ್ ತನ್ನ ಮನೆ ಬಳಿ ಹೇಮಂತ್ ಮೃತದೇಹವನ್ನು ಕಟ್ಟಿಗೆಯಿಂದ ಸುಡಲು ಯತ್ನಿಸಿದಾಗ ಭಾರೀ ಹೊಗೆ ಮತ್ತು ದೇಹ ಸುಟ್ಟ ವಾಸನೆಯಿಂದ ಸ್ಥಳೀಯರು ನೋಡಿದಾಗ ಮೃತದೇಹ ಅರ್ಧ ಸುಟ್ಟಿತ್ತು ಎಂದು ತಿಳಿದುಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಧಾವಿಸಿದ್ದರು.
ಕಾಪು ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಶಿರ್ವ ಎಸ್ಸೈ ಸ್ಥಳಕ್ಕೆ ಭೇಟಿ ನೀಡಿದ್ದರು.
ಶಿರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.