ಕಾರವಾರ: ಕೊರೊನಾ ಸೋಂಕಿತ ಗರ್ಭಿಣಿಗೆ ಕಿಮ್ಸ್ ‌ನಲ್ಲಿ ಸುರಕ್ಷಿತ ಹೆರಿಗೆ; ಜಿಲ್ಲಾಧಿಕಾರಿ ಶ್ಲಾಘನೆ

ಕಿಮ್ಸ್ ವೈದ್ಯರು ಸಿಜೆರಿಯನ್ ಹೆರಿಗೆ ಮುಖಾಂತರ ಮಗುವನ್ನು ಹೊರ ತೆಗೆದಿದ್ದಾರೆ.

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯಕರ.

ಕರಾವಳಿ ಕರ್ನಾಟಕ ವರದಿ/ರವಿತೇಜ ಕಾರವಾರ
ಕಾರವಾರ: ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್ಗೆ ದಾಖಲಾಗಿದ್ದ ತುಂಬು ಗರ್ಭಿಣಿ ಸೋಂಕಿತೆಯು ಶನಿವಾರ ಸಿಜೆರಿಯನ್ ಹೆರಿಗೆ ಮುಖಾಂತರ ಆರೋಗ್ಯಕರವಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕಾರವಾರದ ಈ ಗರ್ಭಿಣಿ ಮಹಿಳೆಯಲ್ಲಿ ಜು.22 ರಂದು ಕೋವಿಡ್ ಸೋಂಕು ದೃಢ ಪಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಅವರನ್ನು ಅದೇ ದಿನ ಕಿಮ್ಸ್ ಕೋವಿಡ್ ವಾರ್ಡ್ಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಆರೈಕೆ ಮಾಡಲಾಗುತ್ತಿತ್ತು. ಶನಿವಾರ ಗರ್ಭಿಣಿಗೆ ಪ್ರಸವವೇದನೆಯಾಗಿದ್ದು, ಸಾಮಾನ್ಯ ಹೆರಿಗೆ ಸಾಧ್ಯವಾಗದ ಕಾರಣ ಕಿಮ್ಸ್ ವೈದ್ಯರು ಸಿಜೆರಿಯನ್ ಹೆರಿಗೆ ಮುಖಾಂತರ ಮಗುವನ್ನು ಹೊರ ತೆಗೆದಿದ್ದಾರೆ.

ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಕುಡ್ತರಕರ ಅವರ ನೇತೃತ್ವದಲ್ಲಿ ಸ್ತ್ರೀರೋಗ ವಿಭಾಗದ ಡಾ. ನರೇಶ ಪಾವಸ್ಕರ, ಡಾ. ಪೂಜಾ, ಅರವಳಿಕೆ ವಿಭಾಗದ ಡಾ. ಮಂಜುನಾಥ ಭಟ್ ಹಾಗೂ ಡಾ. ಅರ್ಚನಾ ಪಿಕಳೆ, ಚಿಕ್ಕ ಮಕ್ಕಳ ತಜ್ಞರಾದ ಡಾ. ವಿಶ್ವನಾಥ, ಡಾ. ವಜ್ರಮಟ್ಟಿ ಹಾಗೂ ಶುಶ್ರೂಷಕಿಯರಾದ ಜಯಶ್ರೀ ನಾಯ್ಕ, ಸುಷ್ಮಾ ನಾಯ್ಕ, ಕನ್ಸೆಪ್ಟಾ ಅಲ್ಮೆಡಾ, ಮೇಘಾ ನಾಯ್ಕ ಮತ್ತು ಓಟಿ ವಿಭಾಗದ ಸಹಾಯಕರಾದ ಸಚಿನ ಇವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿ ಸಿಜೆರಿಯನ್ ಹೆರಿಗೆಯನ್ನು ನಿರ್ವಹಿಸಿದೆ.

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯಕರವಾಗಿದ್ದಾರೆ. ಈ ಯಶಸ್ವಿ ಶಸ್ತ್ರಕ್ರಿಯೆಯನ್ನು ನೇರವೇರಿಸಿದ ತಂಡಕ್ಕೆ ಸಂಸ್ಥೆಯ ನಿರ್ದೆಶಕ ಡಾ. ಗಜಾನನ ನಾಯಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯವರಾದ ಡಾ. ಹರೀಶ ಕುಮಾರ ಅವರು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಈ ಯಶಸ್ವಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

Get real time updates directly on you device, subscribe now.