ಕುಂದಾಪುರ: 119ದಿನಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವ ಮೊನಿಶಾ
ಕೋಳಿ ಮಾಂಸ ಮತ್ತಿತರ ಖಾದ್ಯಗಳೊಂದಿಗೆ ಬೀದಿ ಬೀದಿಗೆ ತೆರಳಿ ಹಸಿದ ನಾಯಿಗಳಿಗೆ ಆಹಾರ ನೀಡುತ್ತಾರೆ.
ಇವರ ಈ ಸೇವೆ ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿ ಹೊಟೇಲ್‌ಗಳು ಮುಚ್ಚಿದಾಗ ಗಮನ ಸೆಳೆಯಿತು. ಭಗವದ್ಗೀತೆಯಿಂದಲೂ ಸ್ಫೂರ್ತಿ ಪಡೆದಿರುವ ಮೊನಿಶಾ.
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಒಂದು ದಿನವಲ್ಲ, ಎರಡು ದಿನ ಅಥವಾ ಒಂದು ವಾರವಲ್ಲ, ಸತತ 119ದಿನಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾ ಜನಮನ ಸೆಳೆದಿದ್ದಾರೆ ಹಂಗಳೂರಿನ ಯುವತಿ ಮೊನಿಶಾ.
ಪ್ರತೀ ದಿನ ಬೆಳಿಗ್ಗೆ ಎದ್ದವರೇ ಏಳು ಗಂಟೆಗೆ ನಾಯಿಗಳಿಗಾಗಿ ಅನ್ನ ಬೇಯಿಸುತ್ತಾರೆ. ಹದಿನಾಲ್ಕು ಕೆಜಿ ಅನ್ನವನ್ನು ಬೀದಿ ನಾಯಿಗಳ ಹಸಿವು ತಣಿಸಲೆಂದೇ ಮೊನಿಶಾ ತಯಾರಿಸುತ್ತಾರೆ. ಕೋಳಿ ಮಾಂಸ ಮತ್ತಿತರ ಖಾದ್ಯಗಳೊಂದಿಗೆ ಬೀದಿ ಬೀದಿಗೆ ತೆರಳಿ ಹಸಿದ ನಾಯಿಗಳಿಗೆ ಆಹಾರ ನೀಡುತ್ತಾರೆ. ನಾಯಿಗಳಿಗೆ ಆಹಾರ ನೀಡಲೆಂದೇ ಹೊಸ ತಟ್ಟೆಗಳನ್ನು ಖರೀದಿಸಿದ್ದು, ಮಧ್ಯಾಹ್ನ ಎರಡು ಗಂಟೆ ಬಳಿಕ ಸಂಜೆ ನಾಲ್ಕುವರೆ ತನಕವೂ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.
ಇವರು ನೀಡಿದ ಅನ್ನ ತಿಂದ ನಾಯಿಗಳಂತೂ ಮೊನಿಶಾ ಅವರನ್ನು ದೂರದಿಂದಲೇ ಗುರುತಿಸಿ ಸಾಕು ನಾಯಿಗಳಂತೆ ಹತ್ತಿರ ಓಡಿ ಬಂದು ಪ್ರೀತಿ ತೋರಿಸುತ್ತಿವೆ. ಮೊನಿಶಾ ಅವರ ಸೇವೆ ನೋಡಿದ ಸ್ಥಳೀಯರು ಕೂಡ ಅಕ್ಕಿ, ಹಾಲು, ಬಿಸ್ಕತ್ ಮತ್ತಿತರ ತಿನಿಸುಗಳನ್ನು ಯಾವುದೇ ಫ್ರತಿಫಲಾಪೇಕ್ಷೆ ಇಲ್ಲದೇ ನೀಡಿ ಇವರನ್ನು ಬೆಂಬಲಿಸುತ್ತಿದ್ದಾರೆ. ಆಹಾರ ತಯಾರಿಸುವಲ್ಲಿ ಮೊನಿಶಾ ಅವರ ತಂದೆ-ತಾಯಿ ಕೂಡ ಸಹಾಯ ಮಾಡುತ್ತಾರೆ. ಸ್ನೇಹಿತ ಅರವಿಂದ್ ಫೆರ್ನಾಂಡಿಸ್ ಕೂಡ ಸಹಾಯ ಹಸ್ತ ನೀಡಿದ್ದಾರೆ.
ಇವರ ಈ ಸೇವೆ ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿ ಹೊಟೇಲ್‌ಗಳು ಮುಚ್ಚಿದಾಗ ಗಮನ ಸೆಳೆಯಿತು. ಸಾಮಾನ್ಯವಾಗಿ ಬೀದಿ ನಾಯಿಗಳು ಅಂಗಡಿಗಳು, ಹೊಟೇಲುಗಳ ಬಳಿ ಜನ ನೀಡಿದ ಅಲ್ಪಸ್ವಲ್ಪ ಆಹಾರವನ್ನೇ ತಿಂದು ಜೀವ ಉಳಿಸಿಕೊಂಡಿರುತ್ತವೆ. ಲಾಕ್‌ಡೌನ್ ಸಮಯದಲ್ಲಿ ತುತ್ತು ಅನ್ನ ಕೂಡ ಸಿಗದೇ ನಾಯಿಗಳು ಹಸಿವಲ್ಲಿ ಇರುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಮನುಷ್ಯರಿಗೇ ದುಡಿಯಲಾರದಂಥ ಪರಿಸ್ಥಿತಿಯಲ್ಲಿ ಅದೆಷ್ಟೋ ಜನರು ಲಾಕ್‌ಡೌನ್ ನಿಂದ ಜೀವನ ಸಾಗಿಸುವುದೇ ಕಷ್ಟಕರವಾದ ಪರಿಸ್ಥಿತಿಯಲ್ಲಿ ನಾಯಿಗಳಿಗೆ ಆಹಾರ ನೀಡುವವರು ಯಾರು? ಇಂಥ ಪರಿಸ್ಥಿತಿಯಲ್ಲಿ ತನ್ನ ಶಕ್ತಿ ಮೀರಿ ನಾಯಿಗಳಿಗೆ ಆಹಾರ ನೀಡಿದ ಮೊನಿಶಾ ಎಲ್ಲರ ಗಮನ ಸೆಳೆದಿದ್ದಾರೆ.
ಮೊನಿಶಾ ಗೇಬ್ರಿಯಲ್ ಕರ್ವಾಲೊ ಕುಂದಾಪುರದ ಹೋಲಿ ರೋಸರಿ, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಲಿತು ಮುಂದೆ ಸೈಂಟ್ ಮೇರೀಸ್ ಸಿರಿಯನ್ ಡಿಗ್ರಿ ಕಾಲೇಜಿನಲ್ಲಿ ಪದವಿ ಪಡೆದವರು. ಆ ಬಳಿಕ ಇಂಗ್ಲೆಂಡಿನ ಲ್ಯಾಂಕಸ್ಟರ್ ವಿವಿಯಲ್ಲಿ ಕಾನೂನು ಪದವೀಧರೆಯಾಗಿದ್ದಾರೆ.
‘ಆದ್ಯ ಅನಿಮಲ್ ವೆಲ್ಫೇರ್’ ಮೂಲಕ ತನ್ನ ಸಮಾಜ ಸೇವೆ ನಡೆಸುತ್ತಿದ್ದಾರೆ. ಭಗವದ್ಗೀತೆಯಿಂದಲೂ ಸ್ಫೂರ್ತಿ ಪಡೆದಿರುವ ಮೊನಿಶಾ ಅವರ ಧ್ಯೇಯ ಲೋಕದ ಸಮಸ್ತರೂ ಸುಖವಾಗಿರುವ ದಿಸೆಯಲ್ಲಿ ತನ್ನಿಂದಾದ ಸೇವೆ ಸಲ್ಲಿಸುವುದಾಗಿದೆ.