ಮಕ್ಕಳ ಅಶ್ಲೀಲ ವಿಡೀಯೋ ಮಾರಾಟ: ಉಡುಪಿಯ ಯುವಕ ಸೆರೆ
ಇನ್ಸ್ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ವಿಡಿಯೋ ಬೇಕಾದವರಿಗೆ ನೀಡಿ ಹಣ ಗಳಿಸುತ್ತಿದ್ದ.
ಸೌರವ್ ಎಂ.ಬಿ.ಎ ಪದವೀಧರ. ಈತನೊಂದಿಗೆ ಅಶ್ಲೀಲ ವಿಡೀಯೊ ಮಾರಾಟ ಜಾಲದಲ್ಲಿ ಹತ್ತು ಮಂದಿ ಭಾಗಿ.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಅಂತರ್ಜಾಲದ ಮೂಲಕ ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲೀಲ ವಿಡಿಯೋ ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದಲ್ಲಿ ಉಡುಪಿಯ ಯುವಕನೋರ್ವನನ್ನು ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಸೌರವ್ ಶೆಟ್ಟಿ(21) ಆರೋಪಿ. ಸೌರವ್ ಶೆಟ್ಟಿ ಇನ್ಸ್ಟಾಗ್ರಾಮ್ ಮೂಲಕ ಅಶ್ಲೀಲ ವಿಡಿಯೋ ಲಿಂಕ್ ರವಾನಿಸುತ್ತಿದ್ದ ಮಾಹಿತಿಯನ್ನು ರಾಜ್ಯದ ನೋಡಲ್ ಅಧಿಕಾರಿಯೊಬ್ಬರು ಸಂಗ್ರಹಿಸಿದ್ದರು.
ಸೌರವ್ ಎಂ.ಬಿ.ಎ ಪದವೀಧರನಾಗಿದ್ದು, ಈತನೊಂದಿಗೆ ಅಶ್ಲೀಲ ವಿಡೀಯೊ ಮಾರಾಟ ಜಾಲದಲ್ಲಿ ಹತ್ತು ಮಂದಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸೌರವ್ ಬಳಿ 7gb ಮಕ್ಕಳ ಅಶ್ಲೀಲ ವೀಡಿಯೊ ಪತ್ತೆಯಾಗಿದೆ. ವಿದ್ಯಾರ್ಥಿಯಾಗಿದ್ದಾಗಲೇ ಈತ ಈ ರೀತಿ ದಂಧೆ ನಡೆಸುತ್ತಿದ್ದ. ಆನ್ಲೈನ್ ಜಾಲದಲ್ಲಿ ಅಶ್ಲೀಲ ವಿಡೀಯೊ ಹುಡುಕುವ ಸಂದರ್ಭ ಈತ ಇಂಥವರ ಸಂಪರ್ಕಕ್ಕೆ ಬಂದು ಇನ್ಸ್ಟಾಗ್ರಾಂ ಮೂಲಕ ಮಕ್ಕಳ ಅಶ್ಲೀಲ ವಿಡಿಯೋ ಬೇಕಾದವರಿಗೆ ನೀಡಿ ಹಣ ಗಳಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಸಿಐಡಿಗೆ ಕೇಂದ್ರ ಸರಕಾರದ ಅಪರಾಧ ದಾಖಲಾತಿ ಬ್ಯೂರೋದಿಂದ ದೊರೆತ ಮಾಹಿತಿ ಅನ್ವಯ ಜು.7ರಂದು ಮಾಹಿತಿ ತಂತ್ರಜಾನ ಕಾಯ್ದೆ ಮತ್ತು ಪೋಕ್ಸೊ ಅನ್ವಯ ಪ್ರಕರಣ ದಾಖಲಾಗಿತ್ತು.
ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲೀಲ ವಿಡೀಯೊಗಳನ್ನು ಆನ್ಲೈನ್ ಮೂಲಕ ಹಂಚುತ್ತಿರುವ ಬಗ್ಗೆ ಮಾಹಿತಿ ದೊರೆತಿತ್ತು. ದೇಶಾದ್ಯಂತ ಅಪ್ರಾಪ್ತ ಮಕ್ಕಳ ವಿಡಿಯೋಗಳನ್ನು ಆನ್ಲೈನ್ನಲ್ಲಿ ಹಂಚುತ್ತಿದ್ದ ಬಗ್ಗೆ ಸಿಐಡಿ ಡಿಎಸ್ಪಿ ಯಶವಂತಕುಮಾರ್ ಅವರು ತನಿಖೆ ನಡೆಸಿದ್ದು, ಆರೋಪಿ ಸೌರವ್ ಶೆಟ್ಟಿ ಸಿಐಡಿ ಬಂಧನದಲ್ಲಿದ್ದಾನೆ.
ಈತನಿಂದ ನಿರ್ಬಂಧಿತ ವಿಡೀಯೋಗಳು, ಡಿಜಿಟಲ್ ಉಪಕರಣ್ಗಳು, ಆನ್ಲೈನ್ ಕ್ಲೌಡ್ ಖಾತೆಗಳು ಜಪ್ತಿ ಮಾಡಲಾಗಿದ್ದು, ಈ ಜಾಲದಲ್ಲಿ ಹಲವರು ಭಾಗಿಯಾಗಿರುವ ಶಂಕೆ ಇದ್ದು ಸಿಐಡಿ ತನಿಖೆ ಮುಂದುವರಿದಿದೆ.