ಕಾರಿನಿಂದ 2ಲಕ್ಷ ರೂ. ಅಧಿಕ ನಗದು ಎಗರಿಸಿದ್ದ ಆರೋಪಿ ಉಡುಪಿ ಪೊಲೀಸ್ ಬಲೆಗೆ

ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ನೇತೃತ್ವದಲ್ಲಿ ನಡೆದ ಮಹತ್ವದ ಕಾರ್ಯಾಚರಣೆ.

ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್. ಉಡುಪಿ ಡಿಸಿಐಬಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಮಂಗಳೂರು ಕ್ಲಾಕ್ ಟವರ್ ಬಳಿ ನಿಲ್ಲಿಸಿದ್ದ ಕ್ರೇಟಾ ಕಾರಿನಿಂದ ಎರಡು ಲಕ್ಷ ರೂ.ಗೂ ಅಧಿಕ ನಗದು ಕಳವು ಮಾಡಿದ್ದ ಪ್ರಕರಣದ ಆರೋಪಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ನೇತೃತ್ವದಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ಉಡುಪಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಗುರುಪ್ರಸಾದ್(32) ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ನಗದು ಹಣ 2,03,700/- ರೂ. ಹಾಗೂ ಕಳವು ಮಾಡಿದ್ದ ಹಣದಲ್ಲಿ 8,000/- ರೂಪಾಯಿಗೆ ಖರೀದಿಸಿದ್ದ ವಿವೊ ಮೊಬೈಲ್ ಫೋನ್  ಸ್ವಾಧೀನಪಡಿಸಿಕೊಂಡು ಉಡುಪಿ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.

ಈತ ಕಳವು ಮಾಡಿದ್ದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ಪಿ ನಿರ್ದೆಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಕುಮಾರ ಚಂದ್ರ ಕೆ.ಎಸ್.ಪಿ.ಎಸ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ  ಟಿ.ಆರ್.ಜೈಶಂಕರ್ ರವರ ಮಾರ್ಗದರ್ಶನದಲ್ಲಿ, ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್.  ಖಚಿತ ಮಾಹಿತಿ ಮೇರೆಗೆ ಉಡುಪಿ ಡಿಸಿಐಬಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ ಘಟಕದ ಎಎಸ್ಐ ರವಿಚಂದ್ರ ಹಾಗೂ ಸಿಬ್ಬಂದಿ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ  ಸಹಕರಿಸಿದ್ದರು.

ಆರೋಪಿ ಗುರುಪ್ರಸಾದ್ ಮೂಡಬಿದ್ರೆಯ ತೋಡಾರು ಗ್ರಾಮದ ನಿವಾಸಿಯಾಗಿದ್ದಾನೆ.

ಈತ ಕೆಲ ವರ್ಷಗಳ ಹಿಂದೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ರಾತ್ರಿವೇಳೆ  ಬೀಗ ಹಾಕಿದ್ದ ಮನೆಯ ಹೆಂಚು ತೆಗೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ.

Get real time updates directly on you device, subscribe now.