‘ಕಾಂಗ್ರೆಸ್ ಸೇರಿಸಿಕೊಳ್ಳಿ ಎಂದು ಕಾಲು ಹಿಡಿದುಕೊಂಡ ಯೋಗೇಶ್ವರ್’: ಡಿ.ಕೆ.ಶಿವಕುಮಾರ್ ಆಕ್ರೋಶ

‘ಈಗ ಯಾಕೆ ಹೀಗೆ ಮಾತಾಡುತ್ತಿದ್ದಾರೋ ಗೊತ್ತಿಲ್ಲ. ಮೆಂಟಲ್ ಆಗಿದ್ದಾರಾ’ ಎಂದು ಅನುಮಾನ ವ್ಯಕ್ತಪಡಿಸಿದ ಡಿಕೆಶಿ

‘ನಮಗೆ ರಾತ್ರಿ ಒಂದು, ಬೆಳಿಗ್ಗೆ ಒಂದು ಕೆಲಸ ಮಾಡುವುದು ಗೊತ್ತಿಲ್ಲ. ಯೋಗೇಶ್ವರ್‌ಗೆ ಇದು ರಕ್ತಗತ. ಅವರನ್ನು ಯಾರೂ ನಂಬುವುದಿಲ್ಲ.’

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಹದಿನೈದು ದಿನಗಳ ಹಿಂದೆ ಯೋಗೇಶ್ವರ್ ನನ್ನ ಬಳಿ ಬಂದು ಕಾಲು ಹಿಡಿದುಕೊಂಡ. ಎಷ್ಟು ಹೇಳಿದರೂ ಪಾದ ಬಿಡಲೇ ಇಲ್ಲ. ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ. ಸದ್ಯದಲ್ಲೇ ಯಡಿಯೂರಪ್ಪನವರನ್ನು ಕುರ್ಚಿಯಿಂದ ಕೆಳಗಿಳಿಸುತ್ತಾರೆ ಎಂದಿದ್ದ. ಆಗ ನಾನು ಬೇಡಪ್ಪ, ನೀನು ಬಿಜೆಪಿ ನಿಷ್ಟನಾಗಿರು ಎಂದು ವಾಪಾಸ್ ಕಳಿಸಿದ್ದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತನ್ನ ವಿರುದ್ಧ ನೀಡಿದ್ದ ಹೇಳಿಕೆಗೆ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತಾಡಿದ ಶಿವಕುಮಾರ್, ಅವರು ‘ಈಗ ಯಾಕೆ ಹೀಗೆ ಮಾತಾಡುತ್ತಿದ್ದಾರೋ ಗೊತ್ತಿಲ್ಲ. ಮೆಂಟಲ್ ಆಗಿದ್ದಾರಾ’ ಎಂದು ಹೇಳಿದರು.

‘ಹಗಲು ವೇಳೆ ಮಾತ್ರ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ನಮ್ಮ ಮುಖ್ಯಮಂತ್ರಿ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೀಡಿದ್ದ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ಬಾಯಿ ಚಪಲಕ್ಕೆ ಯೋಗೇಶ್ವರ್ ಏನೋ ಮಾತಾಡಿದ್ದಾರೆ. ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಅನಿಸುತ್ತಿದೆ’ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ‘ನಮಗೆ ರಾತ್ರಿ ಒಂದು, ಬೆಳಿಗ್ಗೆ ಒಂದು ಕೆಲಸ ಮಾಡುವುದು ಗೊತ್ತಿಲ್ಲ. ಯೋಗೇಶ್ವರ್‌ಗೆ ಇದು ರಕ್ತಗತ. ಅವರನ್ನು ಯಾರೂ ನಂಬುವುದಿಲ್ಲ. ಅವರನ್ನು ನಂಬಿ ಪರಿಷತ್’ಗೆ ಬಿಜೆಪಿ ಹೇಗೆ ನೇಮಿಸಿತೋ ಗೊತ್ತಿಲ್ಲ’ ಎಂದರು.

ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ, ‘ಶಿವಕುಮಾರ್ ಭೇಟಿಗೆ ಯೋಗೇಶ್ವರ್ ಬಂದಿದ್ದು ನಿಜ. ಅದಕ್ಕೆ ನಾನೇ ಸಾಕ್ಷಿ’ ಎಂದಿದ್ದಾರೆ.

 

 

Get real time updates directly on you device, subscribe now.