ನರೆಗಾ ಓಂಬಡ್ಸಮೆನ್ ಆಗಿ ಅಂಕೋಲಾದ ಆರ್. ಜಿ. ನಾಯಕ ನೇಮಕ

ಇವರ ಸೇವೆಯನ್ನು ಪರಿಗಣಿಸಿ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಭೃಷ್ಟಾಚಾರ, ಕಳಪೆ ಕಾಮಗಾರಿ ಹಾಗೂ ಸಾರ್ವಜನಿಕ ದೂರುಗಳನ್ನು ವಿಚಾರಣೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಅಧಿಕಾರವನ್ನು ಓಂಬುಡ್ಸಮೆನ್ ಗೆ ನೀಡಲಾಗಿದೆ

ಕರಾವಳಿ ಕರ್ನಾಟಕ ವರದಿ/ ರವಿತೇಜ ಕಾರವಾರ
ಕಾರವಾರ: ಕೇಂದ್ರ ಸರ್ಕಾರ ಅನುಮೋದಿತ ಮಹಾತ್ಮ ಗಾಂಧಿ ರಾಷ್ಟಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಓಂಬುಡ್ಸಮೆನ್ ಆಗಿ ಅಂಕೋಲಾದ ಆರ್. ಜಿ. ನಾಯಕ ಅವರನ್ನು ನೇಮಿಸಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಸಚಿವಾಲಯ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.

ಈ ಹಿಂದೆ ಆರ್. ಜಿ. ನಾಯಕ ಅವರು ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಉಪ ಕಾರ್ಯದರ್ಶಿಯಾಗಿ ಕರ್ತವ್ಯ ನಿಭಾಯಿಸಿದ್ದರು. 1991ರಲ್ಲಿ ಕೆ.ಎ.ಎಸ್ ಪಾಸಾದ ಇವರು 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಈ ಅವಧಿಯಲ್ಲಿ ಸಾಕಷ್ಟು ಅಕ್ರಮ ಹಾಗೂ ಅವ್ಯವಹಾರ ಪ್ರಕರಣಗಳನ್ನು ತನಿಖೆ ನಡೆಸಿದ್ದರು. ರಾಜಕೀಯ ಒತ್ತಡಗಳಿಗೆ ಮಣಿಯದೇ ತಪ್ಪಿತಸ್ಥರ ವಿರುದ್ದ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಸರ್ಕಾರದ ಅಪರ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಶನದಲ್ಲಿ ಇವರ ಸೇವೆಯನ್ನು ಪರಿಗಣಿಸಿ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ನರೆಗಾ ಯೋಜನೆ ಅನುಷ್ಠಾನದ ಅಡಿ ನಡೆಯುವ ನಿಯಮ ಉಲ್ಲಂಘನೆ, ಹಣ ದುರುಪಯೋಗ, ಭೃಷ್ಟಾಚಾರ, ಕಳಪೆ ಕಾಮಗಾರಿ ಹಾಗೂ ಸಾರ್ವಜನಿಕ ದೂರುಗಳನ್ನು ವಿಚಾರಣೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಹಾಗೂ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡುವ ಅಧಿಕಾರವನ್ನು ಓಂಬುಡ್ಸಮೆನ್ ಗೆ ನೀಡಲಾಗಿದೆ

Get real time updates directly on you device, subscribe now.