ಓಮಾನ್: ಸೊಹಾರ್‌ನಲ್ಲಿ ಕೃಷ್ಣ ಲೀಲೋತ್ಸವ-ಅಂತರ್ಜಾಲದ ಮೂಲಕ ‘ಮುದ್ದು ಕೃಷ್ಣ ಸಾಂಸ್ಕೃತಿಕ ಸಂಜೆ’

ಉಡುಪಿ ಫಲಿಮಾರು ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಶುಭಾರಂಭ

ಸೊಹಾರ್‌ನ ‘ಮಂಗಳೂರು ಭಜನಾಮಂಡಳಿ’ಯು ತನ್ನ ಐದನೇ ವಾರ್ಷಿಕೋತ್ಸವ ಸಂಭ್ರಮವನ್ನು ಇದೇ ಸಂದರ್ಭ ಆಚರಿಸುತ್ತಿದೆ.

ಕರಾವಳಿ ಕರ್ನಾಟಕ ವರದಿ/[email protected]
ಸೊಹಾರ್: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಓಮಾನ್ ದೇಶದ ಸೊಹಾರ್ ಪಟ್ಟಣದಲ್ಲಿ ಪ್ರಥಮ ಬಾರಿಗೆ ಅಂತರ್ಜಾಲದ ಮೂಲಕ ‘ಮುದ್ದು ಕೃಷ್ಣ ಸಾಂಸ್ಕೃತಿಕ ಸಂಜೆ’ ಆಯೋಜಿಸಲಾಗಿದೆ.

ಉಡುಪಿ ಫಲಿಮಾರು ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಶುಭಾರಂಭಗೊಳ್ಳಲಿದೆ.

ಸೊಹಾರ್‌ನ ಮಂಗಳೂರು ಭಜನಾ ಮಂಡಳಿಯು ಸತತ ಐದು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಓಮಾನ್ ಕನ್ನಡಿಗರಿಗೆ ಸಾದರ ಪಡಿಸಿದೆ. ಈ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಂತರ್ಜಾಲದ ಝೂಮ್ ಆಪ್‌ ಮೂಲಕ ಆಯೋಜಿಸಲಾಗಿದೆ.

ಓಮಾನ್ ದೇಶದ ಉದಯೋನ್ಮುಖ ಪ್ರತಿಭೆಗಳಿಂದ ಕಾರ್ಯಕ್ರಮ ನಡೆಯಲಿದೆ.

ವಿದುಷಿ ತೀರ್ಥ ಕಾರ್ತಿಕ ಕಟೀಲ್ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. ತೀರ್ಥ ಅವರು ವಿದುಷಿ ಗೀತಾ ಸರಳಾಯ ಹಾಗೂ ರಶ್ಮಿ ಚಿದಾನಂದ ಇವರಿಂದ ಭರತನಾಟ್ಯದಲ್ಲಿ ತರಬೇತಿ ಹೊಂದಿದ್ದಾರೆ. ತೀರ್ಥ ಅವರ ಓಮಾನ್‌ನ ಇಬ್ಬರು ಶಿಷ್ಯೆಯರಾದ ಕುಮಾರಿ ಶಾರ್ವರಿ ಸುರೇಂದ್ರ ಶೆಟ್ಟಿ ಹಾಗೂ ಕುಮಾರಿ ರೋಶನಿ ರಮಾನಂದ ಪ್ರಭು ಭರತನಾಟ್ಯ ಪ್ರದರ್ಶಿಸಲಿದ್ದಾರೆ.

ಉದಯೋನ್ಮುಖ ಉಭಯಗಾನ ಉಭಯಗಾನ ಕಲಾವಿದೆ ಕುಮಾರಿ ಶ್ರಾವಣಿ ಗುರುಪ್ರಸಾದ್ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಇದೆ. ಕುಮಾರಿ ಶ್ರಾವಣಿ ಕರ್ನಾಟಕ ಶೈಲಿಯ ಸಂಗೀತವನ್ನು ಗುರು ರಮೇಶ್ ನಾರಾಯಣನ್, ಹಿಂದುಸ್ತಾನಿ ಶೈಲಿಯನ್ನು ಗುರು ಉಸ್ತಾದ್ ನದೀಮ್ ಮೊಮಿನ್ ಹಾಗೂ ಸುಗಮ ಸಂಗೀತವನ್ನು ಪಂಚಮ್ ಹಳಿಬಂಡಿಯವರಿಂದ ಅಭ್ಯಾಸ ಮಾಡಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಒಂದು ತಿಂಗಳಿನಿಂದ ಸೊಹಾರ್ ಕನ್ನಡಿಗ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಲವು ಮಕ್ಕಳು ಅತೀವ ಉತ್ಸಾಹದಿಂದ ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

ಕೃಷ್ಣನ ಚಿತ್ರ ರಚನೆ ಸ್ಪರ್ಧೆ, ಶ್ಲೋಕ ಪಠಣ, ದಾಸರ ಪದ, ಭಕ್ತಿ ಗೀತೆ, ಕೃಷ್ಣ-ರಾಧೆಯರ ವೇಷದ ವಿಡೀಯೊ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇವುಗಳ ಫಲಿತಾಂಶವನ್ನು ಸಾಂಸ್ಕೃತಿಕ ಸಂಜೆಯಲ್ಲಿ ಘೋಷಿಸಲಾಗುತ್ತದೆ.

ಓಮಾನ್ ಕನ್ನಡಿಗರು ಮಾತ್ರವಲ್ಲದೆ ಇತರ ದೇಶಗಳಿಂದ ಬಹುಮಂದಿ ಕನ್ನಡಿಗರು, ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಸಾಂಸ್ಕೃತಿಕ ಸಂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

2015ರಲ್ಲಿ ಆರಂಭಗೊಂಡ ಮಂಗಳೂರು ಭಜನಾಮಂಡಳಿಯು ತನ್ನ ಐದನೇ ವಾರ್ಷಿಕೋತ್ಸವ ಸಂಭ್ರಮವನ್ನು ಇದೇ ಸಂದರ್ಭ ಆಚರಿಸುತ್ತಿದೆ. ಇಷ್ಟು ವರ್ಷಗಳ ಸಂಸ್ಥೆಯ ಪ್ರಗತಿಪಥದ ಕಿರು ಚಿತ್ರಣವನ್ನು ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯರು ನಿರೂಪಿಸಲಿದ್ದಾರೆ.

ಸಾಮೂಹಿಕ ಸತ್ಯನಾರಾಯಣ ಪೂಜೆ, ವಿದ್ಯಾಭೂಷಣರ ದಾಸ ಸಂಗೀತ ಕಾರ್ಯಕ್ರಮ, ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಓಮಾನ್ ಕನ್ನಡಿಗರಿಗಾಗಿ ಹಮ್ಮಿಕೊಂಡಿದ್ದಾರೆ.

 

Get real time updates directly on you device, subscribe now.