ಕೆ.ಎಲ್.ಅಶೋಕ್ ಪ್ರಕರಣ: ಶಾಸಕ ರಾಜೇಗೌಡರ ನೈತಿಕತೆ ಪ್ರಶ್ನಿಸಿದ ‘ಕೊಪ್ಪ ಚಲೊ’ ಮುಖಂಡ

ನಿಮ್ಮ ನೈತಿಕತೆಯನ್ನು ನಾವು ಪ್ರಶ್ನೆ ಮಾಡಬೇಕಿದೆ. ನೀವು ನಮ್ಮ ಪ್ರಶ್ನೆಗೆ ಉತ್ತರ ಕೊಡಬೇಕು. ಶಾಸಕರೇ ಏನು ಮಾಡ್ತಾ ಇದ್ದೀರಿ? ನೀವು ಯಾರ ಪರವಾಗಿ ಕೆಲಸ ಮಾಡ್ತಾ ಇದ್ದೀರಿ?

ನಾಳೆ ಶೃಂಗೇರಿ ಕ್ಷೇತ್ರದಲ್ಲಿ ಬೇರೆ ಬೇರೆ ಘಟನೆಗಳು ನಡೀತಕ್ಕಂತಹ ಸಂದರ್ಭದಲ್ಲಿ ನಾವೆಲ್ಲ ದನಿ ಎತ್ತಬೇಕಾಗಿದೆ. ನೀವು ಮೌನವಾಗಿರತಕ್ಕದ್ದಲ್ಲ.

ಕರಾವಳಿ ಕರ್ನಾಟಕ ವರದಿ
ಕೊಪ್ಪ: ‘ನೋ ಪಾರ್ಕಿಂಗ್ ವಿಚಾರದಲ್ಲಿ ನಾನು ಯಾರ ಪರವಾಗಿಯೂ ಪೊಲೀಸರಿಗೆ ಫೋನ್ ಮಾಡಿ ಪ್ರಭಾವ ಬೀರಿಲ್ಲ’ ಎಂದಿರುವ ಶಾಸಕ ಟಿ. ಡಿ. ರಾಜೇಗೌಡರ ಹೇಳಿಕೆ ಪ್ರಗತಿಪರರ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಸಕರ ಧೋರಣೆ ಬಗ್ಗೆ ಜಾತ್ಯತೀತ ಸಂಘಟನೆ ಮುಖಂಡರು ತಮ್ಮ ತೀವೃ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ನೈತಿಕತೆಗೆ ಸವಾಲೆಸೆದಿದ್ದಾರೆ.

ವಿರೋಧ ಪಕ್ಷದ ಶಾಸಕರೇ ನೀವು ವಿರೋಧ ಪಕ್ಷದ ಶಾಸಕರಾಗಿ ಕೆಲಸ ಮಾಡಬೇಕಿದೆ. ನೀವು ಅಶೋಕ್ ಪರ ಕೆಲಸ ಮಾಡಿ ಎಂದು ನಾವು ಹೇಳುತ್ತಿಲ್ಲ. ಅಶೋಕ್ ಅವರ ಪರ ಕೆಲಸ ಮಾಡಲು ಈಗಾಗಲೇ ಸಾವಿರಾರು ಜನ ತುದಿಗಾಲಲ್ಲಿ ನಿಂತಿದ್ದಾರೆ. ನಾಳೆ ಶೃಂಗೇರಿ ಕ್ಷೇತ್ರದಲ್ಲಿ ಬೇರೆ ಬೇರೆ ಘಟನೆಗಳು ನಡೀತಕ್ಕಂತಹ ಸಂದರ್ಭದಲ್ಲಿ ನಾವೆಲ್ಲ ದನಿ ಎತ್ತಬೇಕಾಗಿದೆ. ನೀವು ಮೌನವಾಗಿರತಕ್ಕದ್ದಲ್ಲ. ನೀವು ವಿರೋಧ ಪಕ್ಷದ ಶಾಸಕರು. ನಿಮ್ಮ ನೈತಿಕತೆಯನ್ನು ನಾವು ಪ್ರಶ್ನೆ ಮಾಡಬೇಕಿದೆ. ನೀವು ನಮ್ಮ ಪ್ರಶ್ನೆಗೆ ಉತ್ತರ ಕೊಡಬೇಕು. ಶಾಸಕರೇ ಏನು ಮಾಡ್ತಾ ಇದ್ದೀರಿ? ನೀವು ಯಾರ ಪರವಾಗಿ ಕೆಲಸ ಮಾಡ್ತಾ ಇದ್ದೀರಿ? ಯಾರಿಗೋಸ್ಕರ ಕೆಲಸ ಮಾಡ್ತಾ ಇದ್ದೀರಿ? ಬಾಯಿ ಬಿಟ್ಟು ಮಾತಾಡಿ’ ಎಂದು ಚಿಕ್ಕಮಗಳೂರು ಜಾತ್ಯತೀತ ಸಂಘಟನೆಗಳ ಒಕ್ಕೂಟದ ಎಚ್.ಎಚ್. ದೇವರಾಜ್ ಅವರು ಶಾಸಕರನ್ನು ಪ್ರಶ್ನಿಸಿದ್ದಾರೆ.

ಕೊಪ್ಪ ಪಟ್ಟಣಕ್ಕೆ ಬಂದಿದ್ದ ಸಂದರ್ಭ ಕೆ.ಎಲ್,ಅಶೋಕ್ ಅವರು ಅರಿಯದೇ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ ಸಂದರ್ಭದಲ್ಲಿ ಪೊಲೀಸ್ ಪೇದೆ ಅಶೋಕ್, ಅವರ ಪತ್ನಿ ಮಾತ್ರವಲ್ಲ, ಶಾಸಕ ರಾಜೇಗೌಡ ಅವರನ್ನೂ ಏಕವಚನದಲ್ಲಿ ನಿಂದಿಸಿದ್ದರು.

‘ಶಾಸಕ ರಾಜೇಗೌಡನಿಗಲ್ಲದಿದ್ದರೆ ಅವರಪ್ಪನಿಗೆ ಹೇಳು’ ಎಂದು ನಿಂದಿಸಿದ್ದ ಪೇದೆ

ಕೆ.ಎಲ್.ಅಶೋಕ್

ಪೊಲೀಸ್ ಪೇದೆ ನಿಂದಿಸುವುದನ್ನು ಮುಂದುವರಿಸಿದಾಗ ಪೊಲೀಸ್ ದುರ್ವರ್ತನೆ ಬಗ್ಗೆ ಸ್ಥಳೀಯ ಶಾಸಕರಾದ ರಾಜೇಗೌಡ ಅವರ ಗಮನಕ್ಕೆ ತರುವುದಾಗಿ ಅಶೋಕ್ ತಿಳಿಸಿದ್ದರು. ಈ ಸಂದರ್ಭ ಪೊಲೀಸ್ ಪೇದೆ, ಅಶೋಕ್ ಅವರ ಸಮಜಾಯಿಸಿಯನ್ನಾಗಲಿ, ಅವರ ಮಾತುಗಳನ್ನಾಗಲಿ ಕೇಳದೆ ಕಾರು ಸೀಝ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದದ್ದಲ್ಲದೇ ಶಾಸಕ ರಾಜೇಗೌಡನಿಗಲ್ಲದಿದ್ದರೆ ಅವರಪ್ಪನಿಗೆ ಹೇಳು ಎಂದು ಏಕವಚನದಲ್ಲಿ ನಿಂದಿಸಿದ್ದರು.

ಅವಾಚ್ಯ ಶಬ್ದಗಳಿಂದ ನಿಂದಿಸುವ ಪೊಲೀಸ್ ನಡವಳಿಕೆ ಸರಿಯಲ್ಲ.

‘ನೋ ಪಾರ್ಕಿಂಗ್’ ವಿಚಾರಕ್ಕೆ ಸಂಬಂಧಿಸಿ ಪಟ್ಟಣದಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದಾಗ ಶಾಸಕ ರಾಜೇಗೌಡ ಅವರು ಪತ್ರಕರ್ತರೊಂದಿಗೆ ಮಾತನಾಡಿದಾಗ ಪೊಲೀಸ್ ನಡವಳಿಕೆಯನ್ನು ಖಂಡಿಸಿದ್ದರು. ‘ನೋ ಪಾಕಿಂಗ್’ನಲ್ಲಿ ವಾಹನ ನಿಲುಗಡೆ ತಪ್ಪು. ಈ ವಿಷಯದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೇ ಹೊರತು ಅವಾಚ್ಯ ಶಬ್ದಗಳಿಂದ ನಿಂದಿಸುವ ಪೊಲೀಸ್ ನಡವಳಿಕೆ ಸರಿಯಲ್ಲ. ಇಂಥ ನಡವಳಿಕೆ ಖಂಡಿಸುತ್ತೇನೆ ಎಂದಿದ್ದರು.

ಶಾಸಕ ರಾಜೇಗೌಡ

ಕೊಪ್ಪ ಪಟ್ಟಣದಲ್ಲಿ ಸಂಚಾರ ನಿಯಮಗಳ ನಾಮಫಲಕಗಳು ಸರಿಯಾಗಿ ಇಲ್ಲ. ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಬಹುದು. ನೋ ಪಾರ್ಕಿಂಗ್ ಸ್ಥಳ ತಿಳಿಯದಿರಬಹುದು. ಇಂಥ ಸಂದರ್ಭ ಪೊಲೀಸರು ಅವರೊಂದಿಗೆ ಸಂಯಮದಿಂದ ವರ್ತಿಸಬೇಕು. ಸ್ಪಂದಿಸದಿದ್ದರೆ ದಂಡ ವಿಧಿಸುವಂಥ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಅವಕಾಶವಿದೆ. ಆದರೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ ಎಂದಿದ್ದರು. ‘ನೋ ಪಾಕಿಂಗ್ ವಿಚಾರದಲ್ಲಿ ನಾನು ಯಾರ ಪರವಾಗಿಯೂ ಪೊಲೀಸರಿಗೆ ಫೋನ್ ಮಾಡಿ ಪ್ರಭಾವ ಬೀರಿಲ್ಲ’ ಎಂದು ಹೇಳಿದ್ದರು.

‘ಕೊಪ್ಪ ಚಲೋ’ ಕಾರ್ಯಕ್ರಮಕ್ಕೆ ಬಜರಂಗದಳ ಬೆದರಿಕೆ

‘ಕೊಪ್ಪ ಚಲೊ’ ಚಳುವಳಿಯನ್ನು ಪ್ರಗತಿಪರ ಸಂಘಟನೆ ಮುಖಂಡರು ಸೋಮವಾರ ಹಮ್ಮಿಕೊಂಡರೆ ಅದೇ ಸ್ಥಳದಲ್ಲಿ ಅದೇ ಸಮಯಕ್ಕೆ ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬಲು ಮತ್ತು ಪೊಲೀಸ್ ಮನೋಬಲ ಹೆಚ್ಚಿಸಲು ಪ್ರತಿಭಟನೆ ನಡೆಸುತ್ತೇವೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ. ‘ಕೊಪ್ಪ ಚಲೊ’ ಚಳುವಳಿಯನ್ನು ಪ್ರಗತಿಪರ ಸಂಘಟನೆಗಳು ನಡೆಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಗೌಡ ಹೇರೂರು ಹೇಳಿದ್ದಾರೆ.

ಸಮಾಜದ ಜವಾಬ್ದಾರಿಯುತ ವ್ಯಕ್ತಿ ಕೆ. ಎಲ್.ಅಶೋಕ್ ಹೇಳಿದ್ದು ಸತ್ಯವಲ್ಲ

ಸಮಾಜದ ಜವಾಬ್ದಾರಿಯುತ ವ್ಯಕ್ತಿಯಾದ ಕೆ. ಎಲ್.ಅಶೋಕ್ ಅವರು ನೋ ಪಾರ್ಕಿಂಗ್ ವಿಷಯದಲ್ಲಿ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದಿರುವುದು ಸತ್ಯಕ್ಕೆ ದೂರವಾದ ವಿಚಾರ. ಇದೊಂದು ಕಟ್ಟುಕತೆ.  ಠಾಣಾಧಿಕಾರಿ ಮತ್ತು ಸಿಬಂದಿ ಜನರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲೂ ಜನರೊಂದಿಗೆ ಆತ್ಮೀಯವಾಗಿ ವರ್ತಿಸಿದ್ದಾರೆ. ಸ್ಥಳೀಯ ಪೊಲೀಸರು ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ. ಕೆ.ಎಲ್.ಅಶೋಕ್ ಅವರು ಪೊಲೀಸ್ ವಿರುದ್ಧ ಹೊರಿಸಿರುವ ಆರೋಪವನ್ನು ಖಂಡಿಸುತ್ತೇನೆ ಎಂದು ಪೊಲೀಸ್ ನಡವಳಿಕೆಯನ್ನು ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ಸಮರ್ಥಿಸಿದ್ದಾರೆ.

ಸೂಕ್ತ ಕ್ರಮ ಜರುಗಿಸಬೇಕು: ಕಲ್ಕುಳಿ ವಿಠಲ ಹೆಗ್ಡೆ

ಪೊಲೀಸರು ಜನರೊಂದಿಗೆ ಶಾಂತಿಯುತವಾಗಿ ವರ್ತಿಸಬೇಕು. ಕೆ.ಎಲ್.ಅಶೋಕ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸ್ ಸಿಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಪ್ರಗತಿಪರ ಸಂಘಟನೆಗಳ ಒಕ್ಕೂಟ ನಡೆಸುವ ಪ್ರತಿಭಟನೆ, ಹೋರಾಟಗಳನ್ನು ಬೆಂಬಲಿಸುವುದಾಗಿ ಖ್ಯಾತ ಪರಿಸರವಾದಿ, ಸಾಹಿತಿ ಕಲ್ಕುಳಿ ವಿಠಲ ಹೆಗ್ಡೆ ತಿಳಿಸಿದ್ದಾರೆ.

Get real time updates directly on you device, subscribe now.