ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

ಸೆ.8ರಂದು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಶ್ವಾಸಕೋಶದ ಸಮಸ್ಯೆ ಕಾರಣ ವೆಂಟಿಲೇಟರ್ ವ್ಯವಸ್ಥೆ ಮುಂದುವರಿಸಲಾಗಿತ್ತು.

ಹದಿನಾರು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ಎಸ್.ಪಿ.ಬಿ ಆರು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದರು.

ಕರಾವಳಿ ಕರ್ನಾಟಕ ವರದಿ
ಚೆನ್ನೈ: ಕೊರೋನಾ ಸೋಂಕಿತರಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ನಿಧನ ಹೊಂದಿದ್ದಾರೆ.

ಮಧ್ಯಾಹ್ನ 1:04ಕ್ಕೆ ಬಾಲಸುಬ್ರಹ್ಮಣ್ಯಂ ಅವರು ಮೃತಪಟ್ಟಿದ್ದಾರೆಂದು ಎಸ್.ಪಿ ಪುತ್ರ ಚರಣ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಆ.5ರಂದು ಕೋವಿಡ್ ಸೋಂಕು ದೃಢಪಟ್ಟ ಬಳಿಕ ಚೆನ್ನೈ ಎಂ.ಜಿಎಮ್ ಆಸ್ಪತ್ರೆಗೆ ದಾಖಲಾಗಿದ್ದರು. ಸೆ.8ರಂದು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಶ್ವಾಸಕೋಶದ ಸಮಸ್ಯೆ ಕಾರಣ ವೆಂಟಿಲೇಟರ್ ವ್ಯವಸ್ಥೆ ಮುಂದುವರಿಸಲಾಗಿತ್ತು.

ಚೆನ್ನೈ ಎಂಜಿಎಂ ಹೆಲ್ತ್ ಕೇರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಕಫ, ಶೀತ-ಜ್ವರ ಹೊರತುಪಡಿಸಿ ಏನೂ ತೊಂದರೆ ಇಲ್ಲ. ನನ್ನ ಆರೋಗ್ಯದ ಬಗ್ಗೆ ಕಳವಳ ಬೇಡ. ಯಾರು ಕೂಡ ಪೋನ್ ಕರೆ ಮಾಡಿ ಆರೋಗ್ಯ ವಿಚಾರಿಸುವುದು ಬೇಡ. ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದೇನೆ ಎಂದು ಎಸ್.ಪಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಸಂದೇಶ ಕಳಿಸಿದ್ದರು.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಎಪ್ಪತ್ನಾಲ್ಕು ವರ್ಷ ವಯಸ್ಸಾಗಿತ್ತು.  ಹದಿನಾರು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ಎಸ್.ಪಿ.ಬಿ ಆರು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದರು.

ನಟನಾಗಿಯೂ ಗುರುತಿಸಿಕೊಂಡಿದ್ದ ಎಸ್.ಪಿ.ಬಿಯವರು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪಾತ್ರರಾಗಿದ್ದರು.

 

Get real time updates directly on you device, subscribe now.