‘ಪವರ್ ಟಿವಿ’ ದಮನ ಪ್ರಕರಣ: ಸಿಎಂ ಯಡಿಯೂರಪ್ಪ ರಾಜೀನಾಮೆಗೆ ಐವನ್ ಡಿ’ಸೋಜಾ ಆಗ್ರಹ

ಆರ್.ಟಿ.ಜಿ.ಎಸ್ ಮೂಲಕ ಹಣ ವರ್ಗಾವಣೆಯಾಗಿರುವ ದಾಖಲೆ ಇರುವಾಗ ತನಿಖೆಯಾಗಬೇಡವೆ?

ನೈತಿಕತೆ ಇದ್ದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಭ್ರಷ್ಟಾಚಾರ ಬಯಲಿಗೆಳೆದ ‘ಪವರ್ ಟಿವಿ’ ವಿರುದ್ಧ ದಮನಕಾರಿ ನೀತಿಯನ್ನು ರಾಜ್ಯ ಬಿಜೆಪಿ ಸರಕಾರ ಅನುಸರಿಸುತ್ತಿದ್ದು, ರಾಜ್ಯಪಾಲರು ಮಧ್ಯಪ್ರವೇಶಿಸಬೇಕು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸರಕಾರವೊಂದು ತನ್ನ ಮೇಲಿನ ಭ್ರಷ್ಟಾಚಾರದ ಆರೋಪಕ್ಕೆ ಪ್ರತಿಯಾಗಿ ದ್ವೇಷ ರಾಜಕಾರಣ ನಡೆಸಿದೆ. ಇದರ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜ ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಬಿಡಿಎ ಪ್ರಕರಣ ಒಂದರಲ್ಲಿ 24ಕೋಟಿ ಹಗರಣ ನಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿಕರು ಶೇಷಾದ್ರಿಪುರಂ ಬ್ಯಾಂಕ್ ಶಾಖೆ ಮೂಲಕ 7.44ಕೋಟಿ ಪಡೆದಿದ್ದು, ಉಳಿದ ಹಣ ಇನ್ನೊಂದು ಬ್ಯಾಂಕ್ ಮೂಲಕ ಅವರ ಕಂಪೆನಿಗೆ ವರ್ಗಾವಣೆಯಾಗಿದೆ. ಆರ್.ಟಿ.ಜಿ.ಎಸ್ ಮೂಲಕ ಹಣ ವರ್ಗಾವಣೆಯಾಗಿರುವ ದಾಖಲೆ ಇರುವಾಗ ತನಿಖೆಯಾಗಬೇಡವೆ ಎಂದು ಐವನ್ ಪ್ರಶ್ನಿಸಿದರು.

ಈ ಬಗ್ಗೆ ಸುದ್ದಿ ಬಿತ್ತರಿಸಿದ ಪವರ್ ಟಿವಿ ಚಾನೆಲ್ ಮೇಲೆ ಬಲ ಪ್ರಯೋಗಿಸುವ ಮೂಲಕ ಬಾಯಿ ಮುಚ್ಚಿಸಲು ಬಿಜೆಪಿ ಯತ್ನಿಸುತ್ತಿದೆ. 2008ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರೇರಣಾ ಟ್ರಸ್ಟ್ ಮೂಲಕ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರ ಕಳೆದುಕೊಂಡಿದ್ದರು. ಈಗ ಮತ್ತೆ ಭ್ರಷ್ಟಾಚಾರ ನಡೆದಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಐವನ್ ಹೇಳಿದ್ದಾರೆ.

ಭ್ರಷ್ಟಾಚಾರ ಬಯಲಿಗೆಳೆದ ಮಾಧ್ಯಮದ ವಿರುದ್ಧವೇ ದ್ವೇಷ ಸಾಧನೆ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಕರ್ನಾಟಕದ ಪಾಲಿಗೆ ಇದೊಂದು ಕಪ್ಪು ಚುಕ್ಕೆಯಾಗಿದ್ದು, ಮಾಧ್ಯಮ ಸ್ವಾತಂತ್ರ್ಯ ರಕ್ಷಣೆಗಾಗಿ  ನೈತಿಕತೆ ಇದ್ದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು.

ಕಾಂಗ್ರೆಸ್ ನಾಯಕರಾದ ಇಬ್ರಾಹಿಂ ಕೋಡಿಜಾಲ್, ಪಿ.ಎಂ. ಮುಸ್ತಫಾ, ಎ.ಸಿ. ಜಯರಾಜ್ ಇದ್ದರು.

 

 

Get real time updates directly on you device, subscribe now.