ಬೈಂದೂರು: ಜಿಪಂ ಬಿಜೆಪಿ ಸದಸ್ಯರ ಜಾಗದಿಂದ ಬಾಕ್ಸೈಟ್ ಅಕ್ರಮ ಸಾಗಾಟ, 1.59ಲಕ್ಷ ದಂಡ

ಬೈಂದೂರು ಎಸ್ಸೈ ಸಂಗೀತಾ ಅವರ ತಂಡ ಎರಡು ಲಾರಿ, ಹಿತಾಚಿ, ಮಣ್ಣು ವಶಪಡಿಸಿಕೊಂಡಿದೆ.

ಬಾಕ್ಸೈಟ್ ಅಂಶ ಮಣ್ಣಿನಲ್ಲಿ ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಅಕ್ರಮವಾಗಿ, ಅನುಮತಿ ರಹಿತವಾಗಿ ಮಣ್ಣು ಸಾಗಾಟ ನಡೆಸಿದ ಕಾರಣಕ್ಕೆ ಪೊಲೀಸ್ ದಾಳಿ ನಡೆದಿದೆ ಎಂದಿದ್ದಾರೆ ಜಿಪಂ ಬಿಜೆಪಿ ಸದಸ್ಯ ಸುರೇಶ ಬಟವಾಡಿ.

ಕರಾವಳಿ ಕರ್ನಾಟಕ ವರದಿ
ಬೈಂದೂರು: ಒತ್ತಿನೆಣೆಯ ಸೆಳ್ಳೆಕುಳ್ಳಿ ಎಂಬಲ್ಲಿ ಜಿಪಂ ಬಿಜೆಪಿ ಸದಸ್ಯ ಸುರೇಶ್ ಬಟವಾಡಿ ಎಂಬವರ ಜಾಗದಿಂದ ಅಕ್ರಮವಾಗಿ ಬಾಕ್ಸೈಟ್ ಮಣ್ಣನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬೈಂದೂರು ಎಸ್ಸೈ ಸಂಗೀತಾ ಅವರ ತಂಡ ಎರಡು ಲಾರಿ, ಹಿತಾಚಿ, ಮಣ್ಣು ವಶಪಡಿಸಿಕೊಂಡಿದೆ.

ಶ್ರೀಕಾಂತ ಶೆಟ್ಟಿ ಎಂಬವರು ಒಂದು ತಿಂಗಳಿನಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಗಣಿ ಇಲಾಖೆ ಅನುಮತಿ ಪಡೆಯದೇ ಸುರೇಶ್ ಬಟವಾಡಿಯವರ ಜಾಗದಿಂದ ಬಾಕ್ಸೈಟ್ ಅಂಶ ಹೊಂದಿರುವ ಮಣ್ಣು ಸಾಗಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಅನುಸರಿಸಿ ಎಸ್ಸೈ ಸಂಗೀತ ಅವರು ದಾಳಿ ನಡೆಸಿದ್ದರು.

ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಲಾರಿ ಮತ್ತು ಮುವತ್ತು ಲಕ್ಷ ಮೆಟ್ರಿಕ್ ಟನ್ ಮಣ್ಣು ವಶಕ್ಕೆ ಪಡೆದಿದ್ದಾರೆ. 1.59ಲಕ್ಷ ರೂ. ದಂಡ ವಿಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಪಂ ಸದಸ್ಯ ಸುರೇಶ ಬಟವಾಡಿ ಪಟ್ಟಾ ಸ್ಥಳದಲ್ಲಿರುವ ಜಾಗವನ್ನು ಫ್ಯಾಕ್ಟರಿ ನಿರ್ಮಾಣ ಉದ್ದೇಶದಿಂದ ಸಮತಟ್ಟು ಮಾಡಲು ಶ್ರೀಕಾಂತ ಶೆಟ್ಟಿಗೆ ಗುತ್ತಿಗೆ ವಹಿಸಲಾಗಿತ್ತು. ಈ ಬಗ್ಗೆ ಅವರಿಂದ ಹಣ ಪಡೆದಿಲ್ಲ. ಇಲ್ಲಿ ಬಾಕ್ಸೈಟ್ ಅಂಶ ಮಣ್ಣಿನಲ್ಲಿ ಇರುವ ಬಗ್ಗೆಯೂ ಮಾಹಿತಿ ಇರಲಿಲ್ಲ. ಅಕ್ರಮವಾಗಿ, ಅನುಮತಿ ರಹಿತವಾಗಿ ಮಣ್ಣು ಸಾಗಾಟ ನಡೆಸಿದ ಕಾರಣಕ್ಕೆ ಪೊಲೀಸ್ ದಾಳಿ ನಡೆದಿದೆ ಎಂದಿದ್ದಾರೆ.

 

Get real time updates directly on you device, subscribe now.