ಅನುಶ್ರೀ ವಿಚಾರಣೆ ನಡೆಸದಂತೆ ಪ್ರಭಾವ ಬೀರಿದ ಮಾಜಿ ಸಿಎಂ ಹೆಸರು ಬಹಿರಂಗಪಡಿಸಿ: ಕುಮಾರಸ್ವಾಮಿ ಸವಾಲು

ಯಾರು ಆ ಮಾಜಿ ಮುಖ್ಯಮಂತ್ರಿ ಎಂದು ಸತ್ಯ ಹೇಳಿ.

ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಜರುಗಿಸಿ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಿರೂಪಕಿ ಅನುಶ್ರೀಯವರ ವಿಚಾರಣೆ ನಡೆಸದಂತೆ ಪ್ರಭಾವ ಬೀರಲು ಯತ್ನಿಸಿದ, ನಿರೂಪಕಿ ಜೊತೆ ಸಂಪರ್ಕದಲ್ಲಿದ್ದ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಬಹಿರಂಗಪಡಿಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಧ್ಯಮಗಳಿಗೆ ಸವಾಲು ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಮಗ ಅನುಶ್ರೀ ಜೊತೆ ಸಂಪರ್ಕದಲ್ಲಿದ್ದು, ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು ಎಂಬ ಮಾಧ್ಯಮ ವರದಿಗಳ ಬಗ್ಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರು ಆ ಮಾಜಿ ಮುಖ್ಯಮಂತ್ರಿ ಎಂದು ಸತ್ಯ ಹೇಳಿ. ಮಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರೇ ಮಾಹಿತಿ ನೀಡಿದ್ದಾಗಿ ವರದಿ ಮಾಡಿದ ಪತ್ರಕರ್ತರು ನನಗೆ ತಿಳಿಸಿದ್ದಾರೆ. ತನಿಖೆ ನಡೆಯುವಾಗ ಮಾಹಿತಿ ಸೋರಿಕೆ ಆಗಿದ್ದು ಹೇಗೆ? ಅಧಿಕಾರಿ ಸತ್ಯ ಹೇಳಬೇಕು. ಇಲ್ಲದಿದ್ದರೆ ಆತನನ್ನು ಬಂಧಿಸಬೇಕು. ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈಗ ನಾನು ಮಾತನಾಡದಿದ್ದರೆ ಜನರು ತಪ್ಪು ಕಲ್ಪನೆ ಮಾಡಿಕೊಳ್ಳುತ್ತಾರೆ. ಕಪೋಲಕಲ್ಪಿತ ವರದಿಗಳನ್ನು ಪ್ರಸಾರ ಮಾಡುವುದರ ವಿರುದ್ಧ ಕ್ರಮ ಜರುಗಿಸುವಂತೆ ಸಿಎಂ ಹಾಗೂ ಗೃಹಸಚಿವರಿಗೆ ಪತ್ರ ಬರೆಯುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ನಿರೂಪಕಿಯ ಪ್ರಕರಣದಲ್ಲಿ ಪ್ರಭಾವ ಬೀರಿದ ಮಾಜಿ ಮುಖ್ಯಮಂತ್ರಿ ಯಾರು ಎಂಬ ಸತ್ಯ ಹೇಳಬೇಕಲ್ಲವೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ದಿಢೀರ್ ವರ್ಗಾವಣೆಗೆ ತಡೆ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಿರೂಪಕಿ ಅನುಶ್ರೀ ವಿಚಾರಣೆ ನಡೆಸಿದ್ದ ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿತ್ತು.  ದಿಡೀರ್ ವರ್ಗಾವಣೆ ಬಗ್ಗೆ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ವರ್ಗಾವಣೆಯನ್ನು ಪೊಲೀಸ್ ಇಲಾಖೆ ತಡೆಹಿಡಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಅವರು ‘ಇನ್ಸ್ಪೆಕ್ಟರ್ ವರ್ಗಾವಣೆ ಹಿಂದೆ ಇರುವ ಕಾರಣವೇ ಬೇರೆ. ವರ್ಗಾವಣೆ ಕುರಿತು ಈಗ ಪ್ರಚಾರವಾಗುತ್ತಿರುವ ವಿಷಯ ಸತ್ಯಕ್ಕೆ ದೂರ ಎಂದಿದ್ದಾರೆ. ಯಾವ ಅಧಿಕಾರಿಗಳ ಮೇಲೂ ಒತ್ತಡ ಹೇರಲಾಗಿಲ್ಲ’ ಎಂದಿದ್ದಾರೆ.

Get real time updates directly on you device, subscribe now.