ಹತ್ರಾಸ್‌‌ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಬಿಜೆಪಿಯಲ್ಲಿರುವ ಹೆಣ್ಣು ಮಕ್ಕಳು ತುಟಿ ಪಿಟಿಕೆನ್ನುವುದಿಲ್ಲ ಯಾಕೆ?: ಜ್ಯೋತಿ ಹೆಬ್ಬಾರ್

ದಲಿತ ಮಹಿಳೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ವಿರೋಧಿಸಿ ಕಾಂಗ್ರೆಸ್ ಕಛೇರಿಯಿಂದ ಪ್ರತಿಭಟನಾ ಸ್ಥಳ ಮಠದಂಗಡಿ ಪೇಟೆ ತನಕ ಕ್ಯಾಂಡಲ್ ಮಾರ್ಚ್.

ಪ್ರಧಾನಿ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಘೋಷಣೆ ರಾಜಕೀಯವನ್ನು ಮಾಡುತ್ತಿದ್ದಾರೆ. ದಿನ ಬೆಳಗಾದರೆ ದೇಶದಲ್ಲಿ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ:  ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಜರಗಿದ ದಲಿತ ಮಹಿಳೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆಯ ಬಗ್ಗೆ ಬಿಜೆಪಿಯಲ್ಲಿರುವ ಹೆಣ್ಣು ಮಕ್ಕಳು ತುಟಿ ಪಿಟಿಕೆನ್ನುವುದಿಲ್ಲ ಯಾಕೆ? ಅವರು ಹೆಣ್ಣಲ್ಲವೇ ? ರಾಜಕೀಯ ಹಿತಾಸಕ್ತಿಗಾಗಿ ಹೆಣ್ಣುಮಕ್ಕಳನ್ನು ಬಳಸಿಕೊಳ್ಳಬೇಡಿ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಹೇಳಿದ್ದಾರೆ.

ದಿನ ಬೆಳಗಾದರೆ ದೇಶದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಜರಗಿದ ದಲಿತ ಮಹಿಳೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಂತರ ಸರಕಾರ ತೆಗೆದುಕೊಂಡ ನಿಲುವುಗಳು ಹೆಣ್ಣು ಮಕ್ಕಳ ಅಸ್ತಿತ್ವವನ್ನು ಪ್ರಶ್ನಿಸುವಂತಿವೆ. ನಮ್ಮ ಪ್ರಧಾನಿಗಳು ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಘೋಷಣೆಯನ್ನು ಹಿಡಿದುಕೊಂಡು ಸಾಕಷ್ಟು ರಾಜಕೀಯವನ್ನು ಮಾಡುತ್ತಿದ್ದಾರೆ. ಆದರೆ ದಿನ ಬೆಳಗಾದರೆ ದೇಶದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಂತೂ ಈ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ನಮ್ಮನ್ನು ಆಳುವ ಸರಕಾರ ಮೌನ ವಹಿಸುತ್ತಿದೆ ಎಂದು ಹೆಬ್ಬಾರ್ ಕಳವಳ ವ್ಯಕ್ತಪಡಿಸಿದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ, ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಎಸ್.ಸಿ. ಎಸ್.ಟಿ. ಘಟಕ ಜಂಟಿ ಆಶ್ರಯದಲ್ಲಿ, ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಮನಿಷಾ ವಾಲ್ಮೀಕಿ ಎಂಬ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಆಗ್ರಹಿಸಿ ಜರಗಿದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಹೆಣ್ಣನ್ನು ಪೂಜಿಸೋದು ಬೇಡ; ನಿರಾತಂಕವಾಗಿ ಬದುಕಲು ಬಿಡಿ 

ಭಾರತ  ಪ್ರಾಚೀನ ಕಾಲದಿಂದಲೂ ಹೆಣ್ಣನ್ನು ಗೌರವಿಸುತ್ತಿದೆ ಮತ್ತು ಆಕೆಯನ್ನು ಪೂಜಿಸುವ ಸಂಸ್ಕೃತಿಯಿಂದ ಬೆಳೆದು ಬಂದದ್ದು. ಈಗ ಹೆಣ್ಣನ್ನು ಪೂಜಿಸೋದು ಬೇಡ, ಅವರನ್ನು ನಿರಾತಂಕವಾಗಿ ಬದುಕಲು ಬಿಡಿ ಎಂದು ಹೆಬ್ಬಾರ್ ನುಡಿದರು.

ಆದಿತ್ಯನಾಥ್ ಯೋಗಿಯಲ್ಲ, ಆತ ಒಬ್ಬ ಭೋಗಿ

ಕೇವಲ ಅಧಿಕಾರದ ಲಾಲಸೆಯಿಂದ ಕೇಸರಿ ವೇಷಧಾರಿಯಾಗಿ ಯೋಗಿ ಅನ್ನೋ ಹೆಸರನ್ನು ಇಟ್ಟುಕೊಂಡು ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ನಿಜವಾಗಿಯೂ ಯೋಗಿಯಲ್ಲ, ಆತ ಒಬ್ಬ ಭೋಗಿ. ಕೂಡಲೇ ಮನಿಷಾ ವಾಲ್ಮೀಕಿಗೆ ನ್ಯಾಯ ದೊರಕಿಸಿಕೊಡಿ, ಇಲ್ಲವಾದಲ್ಲಿ ಕಾವಿ ಕಳಚಿ ಮುಖ್ಯಮಂತ್ರಿ ಪದವಿ ತ್ಯಾಗ ಮಾಡಿ, ಇಲ್ಲವಾದರೆ ಹೆಣ್ಣುಮಕ್ಕಳು ಹೊರ ಬರುವಾಗ ಕತ್ತಿ, ಚೂರಿ ಹಿಡಿದುಕೊಂಡು ಹೊರಬರುವ ಕಾಲ ಬಂದಾವು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಸ್ವಸ್ಥ ಸಮಾಜದ ನಿಮಾಣಕ್ಕಾಗಿ ಸ್ವಾತಂತ್ರ್ಯ ಹೋರಾಟದ ಸಮಯದ ಚಳುವಳಿಯಂತೆ ಕಾಂಗ್ರೆಸ್ ಮತ್ತೊಮ್ಮೆ ಚಳುವಳಿಯನ್ನು ಸಂಘಟಿಸುವ ಕಾಲ ಸನ್ನಿಹಿತವಾಗಿದೆ ಎಂದರು.

ಗಾಂಧಿ ಸಿದ್ದಾಂತದ ವಿರುದ್ದವಾಗಿ ದೇಶ ಸಾಗುತ್ತಿದೆ: ವಿನಯ ಕುಮಾರ್ ಸೊರಕೆ

ಗಾಂಧಿ ಪ್ರತಿಪಾದಿಸಿದ ಸಿದ್ದಾಂತದ ವಿರುದ್ದವಾಗಿ ಇಂದು ದೇಶ ಸಾಗುತ್ತಿದೆ. ಉತ್ತರ ಪ್ರದೇಶದಲ್ಲಂತೂ ಚುನಾಯಿತ ಸರಕಾರವಿದೆಯೋ ಅಥವಾ ಸರ್ವಾಧಿಕಾರಿಗಳ ಆಡಳಿತವೇ ಎಂಬ ಸಂಶಯ ಕಾಡುತ್ತಿದೆ. ಆಡಳಿತ ಪಕ್ಷದ ಶಾಸಕನೇ ಹೆಣ್ಣನ್ನು ಅತ್ಯಾಚಾರ ಮಾಡುತ್ತಾನೆ, ಸಾಕ್ಷಿಗಳನ್ನು ಕೊಲ್ಲಲಾಗುತ್ತದೆ. ಅತ್ಯಾಚಾರ ಎಂಬುದು ದೈನಂದಿನ ಕ್ರಿಯೆಯಾಗಿದೆ. ಮನಿಷಾ ವಾಲ್ಮೀಕಿ ಮೇಲಿನ ಅತ್ಯಾಚಾರ ಮತ್ತು ನಂತರ ನಡೆದ ವಿದ್ಯಮಾನ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಸಿ ಬಳಿಯುವ ಕೆಲಸವಾಗಿದೆ ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ನುಡಿದರು.

ಅತ್ಯಾಚಾರವಾಗಿ ಕೊಲೆಯಾದ ಹೆಣ್ಣಿನ ಮನೆಯವರಿಗೆ ಸಾಂತ್ವನ ಹೇಳಲು ಹೊರಟ ನಮ್ಮ ಪಕ್ಷದ ಉನ್ನತ ನಾಯಕರಾದ ರಾಹುಲ್ ಗಾಂಧಿ ಮತ್ತು  ಪ್ರಿಯಾಂಕ ಗಾಂಧಿಯವರನ್ನು ಯೋಗಿ ಸರಕಾರ ನಡೆಸಿಕೊಂಡ ರೀತಿ ಹಿಟ್ಲರ್ ಸರ್ವಾಧಿಕಾರ ಆಡಳಿತವನ್ನು ನೆನಪಿಸುತ್ತದೆ. ಪ್ರಜಾಪ್ರಭುತ್ವ ಮತ್ತು ದೇಶದ ಸಂವಿಧಾನಕ್ಕೆ ಅಪಚಾರವಾದರೆ ಜನ ಸಹಿಸೋದಿಲ್ಲ. ಅದನ್ನು ರಕ್ಷಿಸುವ ಕೆಲಸಕ್ಕೆ ಅಣಿಯಾಗುತ್ತಾರೆ. ಇದನ್ನು ನೋಡುವಾಗ ಯೋಗಿ ಸರಕಾರ ಹೆಚ್ಚು ದಿನ ಬಾಳಲು ಸಾಧ್ಯವಿಲ್ಲ. ಹಾಗಾಗಿ ಕೂಡಲೇ ಯೋಗಿ ಸರಕಾರ ರಾಜಿನಾಮೆ ಕೊಡಬೇಕು. ಎಲ್ಲದಕ್ಕೂ ಮಾತನಾಡುವ ಪ್ರಧಾನಿಗಳು ಮೌನವಾಗಿದ್ದಾರೆ. ಅವರು ಮೌನ ಮುರಿದು ಮಾತನಾಡಬೇಕು ಎಂದು ಸೊರಕೆ ಆಗ್ರಹಿಸಿದರು..

ಅತ್ಯಾಚಾರದ ವಿರುದ್ಧ ಸಂಘಟಿತರಾಗದಿದ್ದರೆ ಹಿಂಸೆ ನಮ್ಮ ಮನೆ ಬಾಗಿಲಿಗೆ: ವೆರೋನಿಕಾ ಕರ್ನೇಲಿಯೋ 

ಅತ್ಯಾಚಾರಿಗಳ ಮನೋಭಾವದ ಬಗ್ಗೆ ಹೆದರಿಕೆಯಾಗುತ್ತಿದೆ. ಅತ್ಯಾಚಾರದಲ್ಲಿ ಅಂತಹ ಹಿಂಸೆ ಜರಗಿದೆ. ಮೃತಳ ಶವ ಸಂಸ್ಕಾರವನ್ನು ಕೂಡಾ ಘನತೆಯಿಂದ ಮಾಡಿಲ್ಲ. ಆಡಳಿತ ವ್ಯವಸ್ಥೆ ಈ ಅತ್ಯಾಚಾರದ ಸಾಕ್ಷ್ಯ ನಾಶದ ಕೆಲಸದಲ್ಲಿ ತೊಡಗಿದೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದಂದಿನಿಂದ ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ಹಿಂಸೆ ತಾಂಡವವಾಡುತ್ತಿದೆ. ಈ ಘಟನೆಯನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಚಳುವಳಿಯನ್ನು ಸಂಘಟಿಸಬೇಕು. ಇಲ್ಲವಾದಲ್ಲಿ ಈ ಹಿಂಸೆ ನಮ್ಮ ಮನೆ ಬಾಗಿಲಿಗೂ ಬಂದೀತು ಎಂದು ಕೆಪಿಸಿಸಿ ಪ್ಯಾನಲಿಸ್ಟ್  ವೆರೋನಿಕಾ ಕರ್ನೇಲಿಯೋ ನುಡಿದರು.

ಪ್ರತಿಟಭನೆಯಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ  ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೆಲನ್ ಫೆರ್ನಾಂಡಿಸ್, ಎಸ್.ಸಿ. ಎಸ್.ಟಿ. ಘಟಕದ ಗಿರೀಶ್ ಗುಡ್ಡೆಯಂಗಡಿ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ ಭಾಗವಹಿಸಿದ್ದರು.

ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಾಧ್ಯಕ್ಷ ಲೋರೆನ್ಸ್ ಡೇಸಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.

ಪ್ರತಿಭಟನೆಯ ಮುನ್ನ ಮಸೀದಿ ಬಳಿಯ ಕಾಂಗ್ರೆಸ್ ಕಛೇರಿಯಿಂದ ಪ್ರತಿಭಟನಾ ಸ್ಥಳ ಮಠದಂಗಡಿ ಪೇಟೆಯ ತನಕ ಕಾರ್ಯಕರ್ತರು ಕ್ಯಾಂಡಲ್ ಮಾರ್ಚ್ ಜರಗಿಸಿದರು.

Get real time updates directly on you device, subscribe now.