ಹರೀಶ್ ಕುಟುಂಬಕ್ಕೆ ಆಸರೆಯಾಗುವಂಥ ಕಾರ್ಯಕ್ರಮ ಮಾಡಿದರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಪೂರ್ಣ ಬೆಂಬಲ
ಕುಂದಾಪುರ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಕರ್ತ ಹರೀಶ್ ಆನಗೋಡುಗೆ ಶ್ರದ್ದಾಂಜಲಿ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜೇಶ್ ಕೆ.ಸಿ ಅವರು ಹರೀಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಹರೀಶ್ ಅವರ ಆಕಸ್ಮಿಕ ನಿಧನ ಅತ್ಯಂತ ನೋವಿನ ಸಂಗತಿಯಾಗಿದೆ. ಹರೀಶ್ ಒಬ್ಬನೆ ಮಗನಾಗಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಅವರ ಆಕಸ್ಮಿಕ ನಿಧನದಿಂದ ಅವರ ಕುಟುಂಬದ ಮುಂದಿನ ದಿನಗಳು ಕೂಡ ತುಂಬಾ ಕಷ್ಟಕರವಾಗಲಿವೆ ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಕಳವಳ ವ್ಯಕ್ತಪಡಿಸಿದರು.
ಇಬ್ಬರು ಸಹೋದರಿಯರು, ತಾಯಿ ಹಾಗೂ ಅನಾರೋಗ್ಯದಲ್ಲಿರುವ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿತ್ತು. ಹರೀಶ್ ಅವರ ಹೆಸರಲ್ಲಿ ಏನಾದರೂ ಕಾರ್ಯಕ್ರಮ ಮಾಡಿದರೆ ಅದಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಶಶಿಧರ ಹೆಮ್ಮಾಡಿ ಹೇಳಿದರು.
ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಹರೀಶ್ ಅವರ ಹಠಾತ್ ಸಾವು ಎಲ್ಲರಿಗೂ ಆಘಾತವನ್ನುಂಟುಮಾಡಿದೆ ಎಂದು ಶಶಿಧರ್ ಹೆಮ್ಮಾಡಿ ಕಂಬನಿ ಮಿಡಿದರು. ಅನಾರೋಗ್ಯದಿಂದ ನಿಧನ ಹೊಂದಿದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಪತ್ರಕರ್ತ ಹರೀಶ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ದಲಿತ ಸಂಘಟನೆಗಳಲ್ಲಿ ಹಾಗೂ ಸೌಹಾರ್ದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಹರೀಶ್ ಅನಾರೋಗ್ಯದಿಂದ ನಮ್ಮನ್ನಗಲಿದ್ದಾರೆ. ಒಬ್ಬ ಒಳ್ಳೆಯ ಮನೆ ಸದಸ್ಯನನ್ನು ಕಳೆದುಕೊಂಡಿದ್ದೇವೆ. ಅತ್ಯಂತ ಸ್ವಾಭಿಮಾನಿಯಾಗಿದ್ದ ಹರೀಶ್ ಅವರ ಹೆಸರಲ್ಲಿ ದಲಿತ ಸಂಘರ್ಷ ಸಮಿತಿ ಭೀಮಾಘರ್ಜನೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮನ್ನು ಹಮ್ಮಿಕೊಳ್ಳುವ ತಯಾರಿಯಲ್ಲಿದೆ. ಇದಕ್ಕೆ ಪತ್ರಕರ್ತರ ಸಂಘವು ಬೆಂಬಲ ನೀಡಬೇಕು ಎಂದು ಹರೀಶ್ ಕುಟುಂಬದ ಸದಸ್ಯ ಉದಯ್ ಕುಮಾರ್ ತಲ್ಲೂರು ನುಡಿದರು.

ಒಬ್ಬ ಪತ್ರಕರ್ತನಾಗಿ, ಒಬ್ಬ ಜಾಹೀರಾತು ಸಂಗ್ರಹಕಾರನಾಗಿ ಹರೀಶ್ ಅತ್ಯಂತ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು ಎಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಯಶೇಖರ ಮಡಪ್ಪಾಡಿ ಹರೀಶ್ ಅವರನ್ನು ಸ್ಮರಿಸಿದರು. ಎಳೆ ವಯಸ್ಸಿನಲ್ಲಿ ಯಾವುದೇ ಮುನ್ಸೂಚನೆ ನೀಡದೇ ಹರೀಶ್ ನಮ್ಮನ್ನು ಅಗಲಿದ್ದಾರೆ. ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು ಎಂದು ಹರೀಶ್ ಜೊತೆಗಿನ ಒಡನಾಟ ನೆನೆದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜೇಶ್ ಕೆ.ಸಿ ಹರೀಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ತಾಲೂಕು ಸಂಘದ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಶ್ರೀಕಾಂತ್ ಹೆಮ್ಮಾಡಿ ಮಾತನಾಡಿದರು.
ಕೃಷ್ಣ ಜಿ ಮೆಂಡನ್, ರಾಘವೇಂದ್ರ ಬಳ್ಕೂರು, ಲಕ್ಷ್ಮೀ ಮಚ್ಚಿನ, ಯೋಗೀಶ್ ಕುಂಭಾಸಿ, ಸಿಲ್ವೆಸ್ಟರ್ ಡಿಸೋಜಾ, ದಿನೇಶ್ ರಾಯಪ್ಪನಮಠ, ರಾಜೇಶ್ ಕುಂದಾಪುರ, ನಾಗರಾಜ್ ವಂಡ್ಸೆ, ಪ್ರಶಾಂತ್ ಪಾದೆ, ಸಂತೋಷ್ ಕುಂದೇಶ್ವರ ಉಪಸ್ಥಿತರಿದ್ದರು.