‘ಲಾಕ್‌ಡೌನ್’ ಆಹಾರ ಕಿಟ್ ವಿತರಣೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಂಚನೆ: ರಾಜೀನಾಮೆಗೆ ಆಗ್ರಹ

ಕಾರ್ಕಳದ ಕಟ್ಟಡ ಕಾರ್ಮಿಕರಿಗೆ ಐದು ಸಾವಿರ ಆಹಾರ ಕಿಟ್ ವಿತರಿಸಲು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ 44.95ಲಕ್ಷ ರೂ. ಹಣ ಬಿಡುಗಡೆ ಮಾಡಿತ್ತು.

ಪಟ್ಟಿಯಲ್ಲಿ ಸತ್ತವರ ಹೆಸರೂ ಇದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಲವರಿಗೆ ಆಹಾರದ ಕಿಟ್ ವಿತರಿಸಿದವರ ಹೆಸರು ಕೂಡ ಇದೆ. ಸರಕಾರದಿಂದ ಯಾವುದೇ ಆಹಾರ ಕಿಟ್ ಸಿಗದಿರುವವರ ಹೆಸರು ಕೂಡ ಇದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಲಾಕ್‌ಡೌನ್ ಸಂದರ್ಭ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಆಹಾರ ಕಿಟ್ ವಿತರಣೆಯ ಬೋಗಸ್ ಪಟ್ಟಿಯನ್ನು ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಸರಕಾರಕ್ಕೆ ಸಲ್ಲಿಸುವ ಮೂಲಕ ವಂಚನೆ ಎಸಗಿದ್ದಾರೆ ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಮಾಹಿತಿ ಹಕ್ಕಿನ ಮೂಲಕ ಪಡೆದ ದಾಖಲೆಗಳಿಂದ ಶಾಸಕ ಸುನಿಲ್ ಕುಮಾರ್ ಅವರ ವಂಚನೆ ಸಾಬೀತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಕಾರ್ಕಳದ ಕಟ್ಟಡ ಕಾರ್ಮಿಕರಿಗೆ ಐದು ಸಾವಿರ ಆಹಾರ ಕಿಟ್ ವಿತರಿಸಲು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ 44.95ಲಕ್ಷ ರೂ. ಹಣ ಬಿಡುಗಡೆ ಮಾಡಿತ್ತು. ಆದರೆ ಕಾರ್ಕಳ ಶಾಸಕರು ಆಹಾರ್ ಕಿಟ್ ನ್ಯಾಯಯುತವಾಗಿ ವಿತರಿಸದೆ ಸರಕಾರ ಮತ್ತು ಜನದ್ರೋಹ ಮಾಡಿದ್ದಾರೆ. ಆದ್ದರಿಂದ ಶಾಸಕರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಶುಭದ ರಾವ್ ಒತ್ತಾಯಿಸಿದ್ದಾರೆ.

ಆಹಾರ ಕಿಟ್ ವಿತರಿಸಲು ಕರೆಯಲಾಗಿದ್ದ ಕೊಟೇಷನ್ ಕೂಡ ನಕಲಿ ಎಂದು ದಾಖಲೆಗಳಿಂದ ಬಯಲಾಗಿದೆ. ಬಿಜೆಪಿ ಪದಾಧಿಕಾರಿಗಳಿಂದಲೇ ಕೊಟೇಷನ್ ಪಡೆದು ಸರಕಾರದ ಹಣ ಬಡವರ ಹೆಸರಲ್ಲಿ ಲೂಟಿಗೈಯಲಾಗಿದೆ ಎಂದು ಶುಭದ ರಾವ್ ಅವರು ಆರೋಪಿಸಿದ್ದಾರೆ.

ಪಟ್ಟಿಯಲ್ಲಿ ಸತ್ತವರ ಹೆಸರೂ ಇದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಲವರಿಗೆ ಆಹಾರದ ಕಿಟ್ ವಿತರಿಸಿದವರ ಹೆಸರು ಕೂಡ ಇದೆ. ಸರಕಾರದಿಂದ ಯಾವುದೇ ಆಹಾರ ಕಿಟ್ ಸಿಗದಿರುವವರ ಹೆಸರು ಕೂಡ ಇದೆ ಎಂಬ ಬಗ್ಗೆ ಅವರು ದಾಖಲೆಗಳನ್ನು ಪ್ರದರ್ಶಿಸಿ ಶಾಸಕ ಸುನಿಲ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಮಾಳ ಪಂ. ಅಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣ ಶೆಟ್ಟಿ, ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ, ಚಿನ್ನದ ಕೆಲಸ ಮಾಡುವ ಸುರೇಶ್ ಆಚಾರ್ಯ ಇದ್ದರು.

 

 

Get real time updates directly on you device, subscribe now.