ಲಾಕ್ಡೌನ್ ಸಂದರ್ಭ ಉದ್ಯೋಗ ನಷ್ಟ: ಗಾಂಜಾ ಮಾರುತ್ತಿದ್ದ ಯುವಕನ ಬಂಧನ
ಕೆಲ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಮತ್ತು ಕೆಲವು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಹೊಟೇಲ್ ಸ್ವಾಗತಕಾರನಾಗಿ ಕೆಲಸ ಮಾಡುತ್ತಿದ್ದ ಯುವಕ ಲಾಕ್ಡೌನ್ ಸಂದರ್ಭ ಕೆಲಸದಿಂದ ತೆಗೆದಿದ್ದರ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಹೊಟೇಲ್ ಸ್ವಾಗತಕಾರನಾಗಿ ಕೆಲಸ ಮಾಡುತ್ತಿದ್ದ ಯುವಕ ಲಾಕ್ಡೌನ್ ಸಂದರ್ಭ ಕೆಲಸದಿಂದ ತೆಗೆದಿದ್ದರ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಗಾಂಜಾ ಮಾರಾಟ ಮಾಡುತ್ತಿದ್ದ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾದ ಆರೋಪದಲ್ಲಿ ಅಮೀರ್ ಮೊಹ್ಮದ್(28) ಎಂಬವರನ್ನು ರಾಜಗೋಪಾಲ ನಗರ ಪೊಲೀಸರು ಬಂಧಿಸಿದ್ದಾರೆ.
ಪೀಣ್ಯ ಎರಡನೇ ಹಂತದಲ್ಲಿ ಬ್ಯಾಗ್ಗಳಲ್ಲಿ ಗಾಂಜಾ ಪೊಟ್ಟಣಗಳನ್ನು ತುಂಬಿಕೊಂಡು ಆರೋಪಿ ಬಂದಿದ್ದಾನೆ ಎಂಬ ಖಚಿತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಇಪ್ಪತ್ತು ಕೆಜಿ ಗಾಂಜಾ ಮತ್ತು ಮುವತ್ತು ಸಾವಿರ ರೂ. ವಶಪಡಿಸಿಕೊಂಡರು.
ಅಗ್ರಹಾರ ಬಡಾವಣೆಯ ತಿರುಮಲಹಳ್ಳಿ ನಿವಾಸಿ ಅಮೀರ್ ಲಾಕ್ಡೌನ್ ಸಂದರ್ಭ ಕೆಲಸ ಕಳೆದುಕೊಂಡ ಬಳಿಕ ಜೀವನೋಪಾಯಕ್ಕಾಗಿ ಆಂಧ್ರಪ್ರದೇಶದಿಂದ ಗಾಂಜಾ ತಂದು ಕೆಲ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಮತ್ತು ಕೆಲವು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.