‘ವಿದ್ಯಾಗಮ’ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ

'ನಾಲ್ಕು ಮಕ್ಕಳಿಗೆ ಸೋಂಕು ತಗುಲಿತೆಂದು ವಿದ್ಯಾಗಮ ವಿಫಲ ಎನ್ನಲಾಗದು' ಎಂದಿದ್ದ ಸುರೇಶ್ ಕುಮಾರ್.

ವಿದ್ಯಾಗಮ ನಿಲ್ಲಿಸದಿದ್ದರೆ ಆಹೋರಾತ್ರಿ ಧರಣಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ  ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಜಾರಿ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಸಂಗ್ರಹಿಸಲು ಉದ್ದೇಶಿಸಿರುವ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ‌ ಹಾಗೂ ಅದರ ಸಮರ್ಪಕ‌ ವಿಶ್ಲೇಷಣೆ‌ ಪೂರ್ಣಗೊಳ್ಳುವವರೆಗೂ ವಿದ್ಯಾಗಮ‌ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಫೇಸ್ ಬುಕ್‌ನಲ್ಲಿ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ನಾಲ್ಕು ಮಕ್ಕಳಿಗೆ ಸೋಂಕು ತಗುಲಿತೆಂದು ವಿದ್ಯಾಗಮ ವಿಫಲ ಎನ್ನಲಾಗದು ಎಂದಿದ್ದ ಸುರೇಶ್ ಕುಮಾರ್

ನಾಲ್ವರು ಮಕ್ಕಳಿಗೆ ಸೋಂಕು ತಗುಲಿದೆ ಎಂದ ಮಾತ್ರಕ್ಕೆ ವಿದ್ಯಾಗಮ ಯೋಜನೆಯೇ ವಿಫಲ ಎಂದು ಬಿಂಬಿಸುವುದು ಸರಿಯಲ್ಲ. ವಿದ್ಯಾಗಮ ಪರಿಪೂರ್ಣ ಮತ್ತು ಸುರಕ್ಷಿತ ಯೋಜನೆ. ಶಾಲೆ ಮುಚ್ಚಿದ ಸಮಯದಲ್ಲೂ ಮಕ್ಕಳ ಕಲಿಕೆ ನಿರಂತರವಾಗಿರಬೇಕು ಎಂಬುದೇ ಯೋಜನೆ ರೂಪಿಸಿರುವ ಉದ್ದೇಶ ಎಂದು ಹಿಂದೆ ಸುರೇಶ್ ಕುಮಾರ್ ಸಮರ್ಥಿಸಿಕೊಂಡಿದ್ದರು. ಕಲಬುರ್ಗಿ ಜಿಲ್ಲೆಯ ಮಾಶಾಳ ಗ್ರಾಮದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ವರದಿ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದರು. ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ಸೋಂಕು ತಗುಲಿರುವುದು ಸಾಧ್ಯವಿಲ್ಲ ಎಂದು ಸ್ಥಳಿಯ ಜಿಲ್ಲಾ ಉಪನಿರ್ದೇಶಕರು ದೃಢಪಡಿಸಿದ್ದಾರೆ. ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ಸತ್ಯವಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜನರ ವ್ಯಾಪಕ ಅಸಮಾಧಾನದ ಹಿನ್ನೆಲೆಯಲ್ಲಿ ಸಚಿವರು ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಂತಿದೆ.

ವಿದ್ಯಾಗಮ ನಿಲ್ಲಿಸದಿದ್ದರೆ ಆಹೋರಾತ್ರಿ ಧರಣಿ: ಕುಮಾರಸ್ವಾಮಿ ಎಚ್ಚರಿಕೆ

ಕೊರೋನಾ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯಾಗಮ ಶಿಕ್ಷಣದ ಹೆಸರಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಾವಿನ ಕಂದಕಕ್ಕೆ ನೂಕುತ್ತಿರುವ ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಬೇಡವೇ? ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಸರಕಾರ ವಿದ್ಯಾಗಮ ಎಡವಟ್ಟು ನಿಲ್ಲಿಸದಿದ್ದರೆ ಆಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಶಿಕ್ಷಣ ಸಚಿವರ ಹೇಳಿಕೆಗಳು

ಮಕ್ಕಳಿಗೆ ಶಿಕ್ಷಣಕೊಡುವ ಸೋಗಿನಲ್ಲಿ ಶಿಕ್ಷಣ ಸಚಿವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆಗಳನ್ನು ನೀಡುತ್ತಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುತ್ತಿರುವುದು ಖಂಡನೀಯ ಹಾಗೂ ಅಮಾನವೀಯ.

ಇಂತಹದೊಂದು ಹುಚ್ಚಾಟ ಸರ್ಕಾರಕ್ಕೆ ಬೇಕೆ?

ಈ ವರ್ಷ ಶಾಲೆ ಆರಂಭಿಸದಿದ್ದರೆ ದೇಶ ಮುಳುಗಿ ಹೋದೀತೆ? ಇಂತಹದೊಂದು ಹುಚ್ಚಾಟ ಸರ್ಕಾರಕ್ಕೆ ಬೇಕೆ? ಇದೊಂದು ನಾಗರಿಕ ಸರ್ಕಾರವೇ? ಎಂದು ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ರಾಜ್ಯಸರಕಾರವನ್ನು ಪ್ರಶ್ನಿಸಿದ್ದಾರೆ. ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರ ಕನಿಷ್ಠ ಆಕ್ಸಿಜನ್ ಒದಗಿಸಲು ಪರದಾಡುತ್ತಿದೆ.

ಜೀವ ಉಳಿದರೆ ತಾನೇ ಬದುಕು?

‘ಜನಪ್ರತಿನಿಧಿ ಇರಲಿ, ಸಾಮಾನ್ಯ ಪ್ರಜೆ ಇರಲಿ, ಜೀವ ರಕ್ಷಣೆ ಮಾಡಬೇಕಾದದ್ದು ಸರ್ಕಾರದ ಮೊದಲ ಆದ್ಯತೆ ಮತ್ತು ಕರ್ತವ್ಯ. ಜೀವ ಉಳಿದರೆ ತಾನೇ ಬದುಕು?’ ‘ನನ್ನ ಜೀವ ಹೋದರೂ ಪರವಾಗಿಲ್ಲ. ಮಂಗಳವಾರದಿಂದ ಸರ್ಕಾರದ ಅನಾಗರಿಕ, ನಿರ್ಲಜ್ಜ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ.’ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಂತ್ವನ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು.

‘ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಆರಂಭಗೊಂಡಿದ್ದ ಸಾಂತ್ವನ ಕೇಂದ್ರಗಳ ಸಿಬ್ಬಂದಿಗೂ ವೇತನವಿಲ್ಲ. ದೂರು ದುಮ್ಮಾನ ಪರಿಹರಿಸುವವರು ಯಾರು?’ ಎಂದು ಪ್ರಶ್ನಿಸಿರುವ ಎಚ್.ಡಿಕೆ, ‘ಲಾಕ್ ಡೌನ್ ಕಾಲದಲ್ಲಿ ಸಾಂತ್ವನ ಕೇಂದ್ರಗಳನ್ನು ಮುಚ್ಚಿ, ಮದ್ಯದಂಗಡಿಗಳನ್ನು ತೆರೆದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಸಾಂತ್ವನ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಈ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು.’ ಎಂದು ಒತ್ತಾಯಿಸಿದ್ದಾರೆ.

ರಾಮದುರ್ಗ(ಬೆಳಗಾವಿ): ವಿದ್ಯಾಗಮ, 30ಮಕ್ಕಳಿಗೆ ಕೋವಿಡ್ ದೃಢ

ರಾಮದುರ್ಗಾದ ಎಂ. ತಿಮ್ಮಾಪುರದಲ್ಲಿ ‘ವಿದ್ಯಾಗಮ’ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಕನ್ನಡ ಹಿ. ಪ್ರಾ. ಶಾಲೆಯ 30ವಿದ್ಯಾರ್ಥಿಗಳಿಗೆ ಶುಕ್ರವಾರ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ‘ವಿದ್ಯಾಗಮ’ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ಮಕ್ಕಳು ಎರಡು, ಮೂರು ಹಾಗೂ ನಾಲ್ಕನೇ ತರಗತಿಯ ವಿದ್ಯಾರ್ಥಿಗಳು. ಶಾಲೆಯಲ್ಲಿ 195ಮಕ್ಕಳಿದ್ದಾರೆ. ಶಿಕ್ಷಕರು ಹತ್ತರಿಂದ ಹನ್ನೆರಡು ಮಕ್ಕಳ ತಂಡ ರಚಿಸಿಕೊಂಡು ಸಾರ್ವಜನಿಕ ಸ್ಥಳಗಳು, ದೇವಸ್ಥಾನ ಮುಂತಾದ ಕಡೆ ವಿದ್ಯಾಗಮ ಯೋಜನೆಯಡಿ ಶಿಕ್ಷಣ ನೀಡುತ್ತಿದ್ದರು.

‘ಶಿಕ್ಷಕರು ಸದ್ಯ ಗ್ರಾಮಕ್ಕೆ ಬರುವ ಹಾಗಿಲ್ಲ’ ಆತಂಕಿತ ಗ್ರಾಮಸ್ಥರ ಎಚ್ಚರಿಕೆ

‘ಶಿಕ್ಷಕರು ಸದ್ಯ ಗ್ರಾಮಕ್ಕೆ ಬರುವ ಹಾಗಿಲ್ಲ’ ಎಂದು ಆತಂಕಿತ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಮಕ್ಕಳಿಗೆ ನ್ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಕರಿಗೆ ಸೋಂಕು ತಗುಲಿಲ್ಲ. ಮುದಕವಿ ಪ್ರಾ. ಆ.ಕೇಂದ್ರದ ಸಿಬಂದಿ ರ್ಯಾಪಿಡ್ ಟೆಸ್ಟ್ ನಡೆಸಿದಾಗ ಆರು ಗ್ರಾಮಸ್ಥರಲ್ಲಿ ಮತ್ತು ಮುವತ್ತು ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.

Get real time updates directly on you device, subscribe now.