ತುಮಕೂರು: ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ನಟಿ ಕಂಗನಾ ವಿರುದ್ಧ ಎಫ್‌ಐಆರ್ ದಾಖಲು
ಸೆ.21ರಂದು ಕಂಗನಾ ತನ್ನ ಟ್ವಿಟರ್ ಖಾತೆಯಲ್ಲಿ ರೈತರನ್ನು ಭಯೋತ್ಪಾದಕರೆಂದು ಕರೆದಿದ್ದರು.
ನ್ಯಾಯಾಲಯದ ಆದೇಶ ಪ್ರತಿ ಸೋಮವಾರ ಸಂಜೆ ತಲುಪಿದ್ದು, ಇಂದು ಐಪಿಸಿ ಕಲಂ 44, 108, 153, 153(a), 504ರ ಅನ್ವಯ ಪ್ರಕರಣ ದಾಖಲಾಗಿದೆ.
ಕರಾವಳಿ ಕರ್ನಾಟಕ ವರದಿ
ತುಮಕೂರು: ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರನ್ನು ಭಯೋತ್ಪಾದಕರು ಎಂದು ಅವಹೇಳನಕಾರಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನ ರಾಣಾವತ್ ಅವರ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆದೇಶದಂತೆ ದೂರು ದಾಖಲಾಗಿದೆ.
ತುಮಕೂರಿನ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಇತ್ತೀಚೆಗೆ ನಟಿ ವಿರುದ್ಧ ದೂರು ದಾಖಲಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿತ್ತು.
ಸೆ.21ರಂದು ಕಂಗನಾ ತನ್ನ ಟ್ವಿಟರ್ ಖಾತೆಯಲ್ಲಿ ರೈತರನ್ನು ಭಯೋತ್ಪಾದಕರೆಂದು ಕರೆದಿದ್ದರು.
ರೈತರನ್ನು ಭಯೋತ್ಪಾಕದರು ಎಂದು ನಿಂದಿಸಿದ್ದ ಕಂಗನಾ ವಿರುದ್ಧ ಹೈಕೋರ್ಟ್ ವಕೀಲ ಎಲ್. ರಮೇಶ್ ನಾಯಕ್ ಸೆ.25ರಂದು ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯ, ಬಾಲಿವುಡ್ ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕ್ಯಾತಸಂದ್ರ ಪೊಲೀಸರಿಗೆ ನಿರ್ದೇಶಿಸಿದೆ.
ತುಮಕೂರು ತಾಲೂಕಿನ ಕದರನಹಳ್ಳಿ ತಾಂಡಾದ ವಕೀಲ ಎಲ್. ರಮೇಶ್ ನಾಯಕ್ ಅವರು ಈ ಮೊದಲು ಡಿಜಿ ಮತ್ತು ಐಜಿ ಅವರಿಗೆ ಕಂಗನಾ ವಿರುದ್ಧ ಇಮೇಲ್ ದೂರು ಸಲ್ಲಿಸಿದ್ದರು. ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ತುಮಕೂರು ಜೆಎಂಎಫ್‌ಸಿ ಕೋರ್ಟ್ ನ್ಯಾಯಾಧೀಶ ವಿನೋದ ಬಾಲ ನಾಯಕ್ ಅವರು ನಟಿ ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸಲು ಅ.9ರ ಶುಕ್ರವಾರ ಸಂಜೆ ಆದೇಶ ನೀಡಿದ್ದರು. ನ್ಯಾಯಾಲಯದ ಆದೇಶ ಪ್ರತಿ ಸೋಮವಾರ ಸಂಜೆ ತಲುಪಿದ್ದು, ಇಂದು ಐಪಿಸಿ ಕಲಂ 44, 108, 153, 153(a), 504ರ ಅನ್ವಯ ಪ್ರಕರಣ ದಾಖಲಾಗಿದೆ.