ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ಮೂರು ತಿಂಗಳು ಸುದ್ದಿವಾಹಿನಿಗಳ ರೇಟಿಂಗ್ ಸ್ಥಗಿತಕ್ಕೆ ಬಾರ್ಕ್ ನಿರ್ಧಾರ.

ಅರ್ನಾಬ್ ವಿರುದ್ಧ 200ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟೀಸ್ ನೀಡಿದ ಸುಶಾಂತ್ ಸಿಂಗ್ ಸ್ನೇಹಿತ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ಟಿಆರ್‌ಪಿ ಹಗರಣದ ಮುಂಬೈ ಪೊಲೀಸ್ ತನಿಖೆ ಪ್ರಶ್ನಿಸಿ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಲು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ನಿರಾಕರಿಸಿದೆ.

ನಿಮ್ಮ ಕಚೇರಿ ಮುಂಬೈ ವರ್ಲಿಯಲ್ಲಿದೆ. ವರ್ಲಿಯಿಂದ ಬಾಂಬೆ ಹೈಕೋರ್ಟ್ ಇರುವ ಸ್ಥಳ ಫ್ಲೋರಾ ಫೌಂಟೇನ್ ಹತ್ತಿರದಲ್ಲಿದೆ.  ನಿಮಗೆ ನಮ್ಮ ಹೈಕೋರ್ಟ್‌ಗಳಲ್ಲಿ ನಂಬಿಕೆ ಇರಬೇಕು. ಸುಪ್ರೀಂ ಕೋರ್ಟ್ ಅನ್ನು ಕೇಳುವ ಮೊದಲು ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಸೂಚಿಸಿದ್ದಾರೆ.

ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆನೀಡುವ ಪ್ರವೃತ್ತಿಯನ್ನು ಸಹ ನ್ಯಾಯಪೀಠ ಖಂಡಿಸಿದೆ. ಈ ದಿನಗಳಲ್ಲಿ ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿ ನೀಡುವ ಬಗ್ಗೆ ಸಹ ನಾವು ಗಮನಿಸಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ ಹೇಳಿದ್ದಾರೆ.

ನ್ಯಾಯಾಲಯ ಅನುಮತಿಸದ ಹಿನ್ನೆಲೆಯಲ್ಲಿ ಮನವಿ ಹಿಂಪಡೆಯಲು ಹಿರಿಯ ವಕೀಲ ಹರೀಶ್ ಸಾಳ್ವೆ ಒಪ್ಪಿದ್ದಾರೆ.

ಸಂವಿಧಾನದ 19 ನೇ ಪರಿಚ್ಚೇಧದ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಪರಾಧಗಳನ್ನು ಮಾಡಲು ಮತ್ತು ಅಪರಾಧದ ತನಿಖೆಯನ್ನು ತಡೆಯಲು  ಆಯುಧವನ್ನಾಗಿ ಬಳಸುವುದಿಲ್ಲ ಎಂಬ ಮನವಿಯನ್ನು ವಿರೋಧಿಸಿ ಮುಂಬೈ ಪೊಲೀಸರು ಅಫಿಡವಿಟ್ ಸಲ್ಲಿಸಿದ್ದರು. ರಿಪಬ್ಲಿಕ್ ಟಿವಿ ಹಗರಣದ ಬಗ್ಗೆ ಟಿವಿ ಡಿಬೇಟ್ ನಡೆಸುತ್ತಿದೆ ಮತ್ತು ಸಾಕ್ಷಿಗಳನ್ನು ಸಂಪರ್ಕಿಸಿ ಬೆದರಿಸುತ್ತಿದೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಮೂರು ತಿಂಗಳು ಸುದ್ದಿವಾಹಿನಿಗಳ ರೇಟಿಂಗ್ ಸ್ಥಗಿತಕ್ಕೆ ಬಾರ್ಕ್ ನಿರ್ಧಾರ

ರಿಪಬ್ಲಿಕ್ ಮತ್ತು ಎರಡು ಟಿವಿ ಚಾನೆಲ್‌ಗಳ ನಕಲಿ ಟಿಆರ್‌ಪಿ ಹಗರಣದ ಬೆನ್ನಲ್ಲೇ ಎಚ್ಚತ್ತ ರೇಟಿಂಗ್ ಏಜೆನ್ಸಿ ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಇಂಗ್ಲೀಷ್, ಹಿಂದಿ ಸೇರಿದಂತೆ ಎಲ್ಲ ಪ್ರಾದೇಶಿಕ ಮತ್ತು ಬಿಸಿನೆಸ್ ನ್ಯೂಸ್ ಚಾನೆಲ್‌ಗಳ ವಾರದ ಟಿಆರ್‌ಪಿ ರೇಟಿಂಗ್ ಅನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ.

ವ್ಯವಸ್ಥೆಯ ಮರುಪರಿಶೀಲನೆ ಟಿಆರ್‌ಪಿ ಸ್ಥಗಿತಗೊಳಿಸಲು ಕಾರಣವಾಗಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್‌ಗಳ ವಿರುದ್ಧ ಟಿಆರ್‌ಪಿ ತಿರುಚುವಿಕೆ ಆರೋಪದಲ್ಲಿ ಮುಂಬೈ ಪೊಲೀಸ್ ತನಿಖೆ ಮುನ್ನಡೆದಿದೆ.

ಅರ್ನಾಬ್ ವಿರುದ್ಧ 200ಕೋಟಿ ರೂ. ಮಾನನಷ್ಟ ನೋಟಿಸ್

ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಹದಿನೈದು ದಿನಗಳ ಒಳಗೆ 200ಕೋಟಿ ರೂ. ಪರಿಹಾರ ಹಾಗೂ ಬೇಷರತ್ ಕ್ಷಮೆ ಯಾಚಿಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಆರ್&ಆರ್ ಅಸೋಸಿಯೇಟ್ಸ್ ವಕೀಲ ರಾಜೇಶ್ ಕುಮಾರ್ ಮೂಲಕ ನಟ ಸುಶಾಂತ್ ಸಿಂಗ್ ಸ್ನೇಹಿತ, ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಮಾನನಷ್ಟ ಮೊಕದ್ದಮೆ ನೋಟೀಸ್ ಗೋಸ್ವಾಮಿಗೆ ನೀಡಿದ್ದಾರೆ. ಅರ್ನಬ್ ಸಹೋದ್ಯೋಗಿಗಳು ತಮ್ಮಿಂದ ಹಣ ವಸೂಲು ಮಾಡುವ ಕ್ರಿಮಿನಲ್ ಸಂಚಿನ ಉದ್ದೇಶದಿಂದ ಸಂದೇಶ ಕಳಿಸಿದ್ದರು. ಇದೀಗ ಅರ್ನಬ್ ಗೋಸ್ವಾಮಿ ಮತ್ತವರ ಟಿವಿ ವಾಹಿನಿಗೆ ಪೇಬ್ಯಾಕ್ ಟೈಮ್(ತಪ್ಪಿಗೆ ಬೆಲೆ ತೆರುವ ಸಮಯ) ಎಂದು ಸಂದೀಪ್ ಸಿಂಗ್ ಹೇಳಿದ್ದಾರೆ.

ಟಿಆರ್‌ಪಿ ಹೆಚ್ಚಿಸುವ ದುರುದ್ದೇಶದಿಂದ ತಮ್ಮ ವಿರುದ್ಧ ದುರುದ್ದೇಶದ ಟ್ವೀಟ್‌ಗಳನ್ನು ಪ್ರಸಾರ ಮಾಡಲಾಗಿದ್ದು, ತನ್ನಿಂದ ಹಣ ವಸೂಲು ಮಾಡುವ ಉದ್ದೇಶ ಮತ್ತು ಕಳಂಕ ತರುವ ಉದ್ದೇಶ ರಿಪಬ್ಲಿಕ್ ಟಿವಿ ಮಾಡಿದೆ ಎಂದು ನೋಟೀಸ್‌ನಲ್ಲಿ ಸಿಂಗ್ ಹೇಳಿದ್ದಾರೆ.

ಟಿವಿ ವಾಹಿನಿಗೆ ಆರ್ಥಿಕ ಪ್ರಯೋಜನ ನೀಡುವುದನ್ನು ಮುಂದುವರಿಸುತ್ತಾ ಹೋಗದಿದ್ದರೆ ಅರ್ನಬ್ ಇಂಥ ಸುದ್ದಿಗಳನ್ನೇ ಪ್ರಸಾರ ಮಾಡುತ್ತಾ ಇರುತ್ತಾರೆ ಎಂದು ಸಂಸ್ಥೆಯ ಕೆಲ ಉದ್ಯೋಗಿಗಳು ತನಗೆ ಬೆದರಿಕೆ ಒಡ್ಡಿದ್ದರು. ‘ಸುಶಾಂತ್ ಕೊಲೆಗಾರ’ ಎಂದು ತನ್ನನ್ನುಹೆಸರಿಸುವ ಬೆದರಿಕೆ ಕೂಡ ರಿಪಬ್ಲಿಕ್ ಟಿವಿ ಉದ್ಯೋಗಿಗಳು ಒಡ್ಡಿದ್ದರು ಎಂದು ಹೇಳಿದ್ದಾರೆ.

ಆ.22 ಹಾಗೂ 24ರ ನಡುವೆ ತಮ್ಮ ನಿವಾಸ ಪ್ರವೇಶಿಸಲು ಯತ್ನಿಸಿ ಭದ್ರತಾ ಸಿಬಂದಿ ಮತ್ತು ಮನೆಯ ಸಹಾಯಕರಿಗೆ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ.

Get real time updates directly on you device, subscribe now.