‘ಲಾಕ್‌ಡೌನ್’ ಆಹಾರ ಕಿಟ್ ವಿತರಣೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಂಚನೆ: ಲೋಕಾಯುಕ್ತಕ್ಕೆ ದೂರಿದ ಶುಭದ ರಾವ್

ಸರಕಾರಕ್ಕೆ ಸಲ್ಲಿಸಿದ್ದ ಫಲಾನುಭವಿಗಳ ಬೋಗಸ್ ಪಟ್ಟಿಯಲ್ಲಿ ಆಹಾರ ಕಿಟ್ ಪಡೆಯದವರ ಹೆಸರುಗಳಲ್ಲದೇ, ಮೃತಪಟ್ಟವರ ಹೆಸರೂ ಇದೆ.

ಆಹಾರ ವಿತರಣೆ ಜವಾಬ್ದಾರಿ ಹೊಂದಿರುವ ಏಜೆನ್ಸಿಯವರ ಬ್ಯಾಂಕ್ ಖಾತೆಯಿಂದ ಭಾರೀ ಮೊತ್ತದ ಹಣ ಶಾಸಕರ ಆಪ್ತರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವುದು ಭ್ರಷ್ಟಾಚಾರ ನಡೆದಿರುವ ಸಂದೇಹಕ್ಕೆ ಪುಷ್ಠಿ ಕೊಡುತ್ತದೆ.

ಕರಾವಳಿ ಕರ್ನಾಟಕ ವರದಿ
ಕಾರ್ಕಳ: ಕೋವಿಡ್ ಲಾಕ್ಡೌನ್ ಸಂದರ್ಭ ರಾಜ್ಯ ಸರಕಾರದ ಕಟ್ಟಡ ಕಾರ್ಮಿಕ ಇಲಾಖೆಯು ಕಾರ್ಕಳಕ್ಕೆ ಬಿಡುಗಡೆಗೊಳಿಸಿದ ಆಹಾರ ಕಿಟ್‌ಗಳನ್ನು ಯಾರಿಗೂ ವಿತರಿಸದೆ ಬೋಗಸ್ ಪಟ್ಟಿ ತಯಾರಿಸಿ ಭ್ರಷ್ಟಾಚಾರ ಎಸಗಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲಾ ಮತ್ತು ತಾಲೂಕು ಕಾರ್ಮಿಕ ಅಧಿಕಾರಿ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಅವರು ಕೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಕಟ್ಟಡ ಕಾರ್ಮಿಕ ಇಲಾಖೆ ಕಾರ್ಕಳಕ್ಕೆ 44,95,000ರೂ. ಮೌಲ್ಯದ 5000 ಕಿಟ್‌ಗಳನ್ನು ಬಿಡುಗಡೆಗೊಳಿಸಿತ್ತು. ಕಾರ್ಕಳ ಶಾಸಕರು ವಿತರಿಸಿದ್ದಾರೆ ಎಂದು ಸರಕಾರಕ್ಕೆ ಸಲ್ಲಿಸಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಆಹಾರ ಕಿಟ್ ಪಡೆಯದವರ ಹೆಸರುಗಳಲ್ಲದೇ, ಮೃತಪಟ್ಟವರ ಹೆಸರೂ ಇದ್ದು, ಈ ಪಟ್ಟಿಯಲ್ಲಿರುವ ಯಾರು ಕೂಡ ಆಹಾರ ಕಿಟ್ ಪಡೆದಿರುವ ದಾಖಲೆ ಇಲ್ಲ. ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಹಣವನ್ನು ಕೋವಿಡ್ ಸಂಕಟದ ಕಾಲದಲ್ಲೂ ಲೂಟಿಗೈಯಲಾಗಿದೆ ಎಂದು ಶುಭದ ರಾವ್ ದೂರಿನಲ್ಲಿ ವಿವರಿಸಿದ್ದಾರೆ.

ಆಹಾರ ವಿತರಣೆ ಜವಾಬ್ದಾರಿ ಹೊಂದಿರುವ ಏಜೆನ್ಸಿಯವರ ಬ್ಯಾಂಕ್ ಖಾತೆಯಿಂದ ಭಾರೀ ಮೊತ್ತದ ಹಣ ಶಾಸಕರ ಆಪ್ತರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವುದು ಭ್ರಷ್ಟಾಚಾರ ನಡೆದಿರುವ ಸಂದೇಹಕ್ಕೆ ಪುಷ್ಠಿ ಕೊಡುತ್ತದೆ ಎಂದು ರಾಜ್ಯ ಲೋಕಾಯುಕ್ತರ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿರುವ ಶುಭದ ರಾವ್ ತನಿಖೆಗೆ ಆಗ್ರಹಿಸಿದ್ದಾರೆ.

ಮಾಹಿತಿ ಹಕ್ಕಿನ ಮೂಲಕ ಪಡೆದ ದಾಖಲೆಗಳಿಂದ ಶಾಸಕ ಸುನಿಲ್ ಕುಮಾರ್ ಅವರ ವಂಚನೆ ಸಾಬೀತಾಗಿದೆ ಎಂದು ಇತ್ತೀಚೆಗೆ ಶುಭದ ರಾವ್ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

Get real time updates directly on you device, subscribe now.