ಬೆಂಗಳೂರು: ಮನೀಶ್ ಶೆಟ್ಟಿ ಕೊಲೆ ತನಿಖೆಗೆ ಒಂಬತ್ತು ವಿಶೇಷ ಪೊಲೀಸ್ ತಂಡ
ಕಬ್ಬನ್ ಪಾರ್ಕ್ ಪೊಲೀಸರು ಮನೀಶ್ ಶೆಟ್ಟಿಯನ್ನು ಆತನ ಕಾರಿನಲ್ಲೇ ಮಲ್ಯ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗದಲ್ಲೇ ಆತ ಮೃತಪಟ್ಟಿದ್ದರು.
ಮನೀಶ್ ಶೆಟ್ಟಿ ಗುರುವಾರ ರಾತ್ರಿ ಮನೆಯಿಂದ ಕಾರಿನಲ್ಲಿ ಡ್ಯುಯೆಟ್ ಪಬ್ಗೆ ಬರುತ್ತಿದ್ದಾಗ ಹಂತಕರು ಬೆನ್ನಿಗೆ ಗುಂಡಿಕ್ಕಿದ್ದರು.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಪಬ್ ಮಾಲಕ ಮನೀಶ್ ಶೆಟ್ಟಿಯನ್ನು ಗುರುವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡಿಕ್ಕಿ ಕೊಲೆಗೈದ ಘಟನೆಗೆ ಸಂಬಂಧಿಸಿ ಒಂಬತ್ತು ವಿಶೇಷ ಪೊಲೀಸ್ ತಂಡಗಳನ್ನು ತನಿಖೆಗೆ ರಚಿಸಲಾಗಿದೆ.
ಮನೀಶ್ ಶೆಟ್ಟಿ(45) ಗುರುವಾರ ರಾತ್ರಿ ಮನೆಯಿಂದ ಕಾರಿನಲ್ಲಿ ತನ್ನ ಡ್ಯುಯೆಟ್ ಪಬ್ಗೆ ಬರುತ್ತಿದ್ದಾಗ ಆತನನ್ನು ಹಂತಕರು ಹಿಂಬಾಲಿಸಿಕೊಂಡು ಬಂದಿದ್ದರು. ಮನೀಶ್ ಶೆಟ್ಟಿ ಕಾರು ನಿಲ್ಲಿಸಿ ಪಬ್ ಮೆಟ್ಟಿಲು ಹತ್ತುತ್ತಿರುವಂತೆ ಹಿಂದಿನಿಂದ ಬೆನ್ನಿಗೆ ಗುಂಡಿಕ್ಕಿದ್ದರು. ಗುಂಡೇಟಿನಿಂದ ಗಾಯಗೊಂಡ ಮನೀಶ್ ಆಕ್ರಂದನಗೈಯುತ್ತಾ ತಿರುಗುತ್ತಿದ್ದಂತೆ ಆತನ ಕಿವಿಯ ಬಳಿ ಚಾಕುವಿನಿಂದ ಇರಿದಿದ್ದ ಮೂವರು ಹಂತಕರು ಜನರು ಓಡಿ ಬರುತ್ತಿದ್ದಂತೆ ಬೈಕ್ ಏರಿ ಪರಾರಿಯಾಗಿದ್ದರು.
ಕಬ್ಬನ್ ಪಾರ್ಕ್ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಮನೀಶ್ ಶೆಟ್ಟಿಯನ್ನು ಆತನ ಕಾರಿನಲ್ಲೇ ಮಲ್ಯ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗದಲ್ಲೇ ಆತ ಮೃತಪಟ್ಟಿದ್ದರು.
ಮನೀಶ್ ಶೆಟ್ಟಿ ಚಿಕ್ಕಮಗಳೂರಿನ ಕೊಪ್ಪದವರಾಗಿದ್ದು, ಪಾತಕಿಗಳಾದ ಬನ್ನಂಜೆ ರಾಜ ಮತ್ತು ರವಿ ಪೂಜಾರಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಆರಂಭದಲ್ಲಿ ಮುತ್ತಪ್ಪ ರೈಯೊಂದಿಗೆ ಕೆಲಸ ಮಾಡುತ್ತಿದ ಮನೀಶ್ ಆ ಬಳಿಕ ಸ್ವತಂತ್ರವಾಗಿ ಪಾತಕ ಚಟುವಟಿಕೆ ನಡೆಸುತ್ತಿದ್ದ ಎನ್ನಲಾಗಿದೆ.
ಬೆಂಗಳೂರನ್ನು ಬೆಚ್ಚುವಂತೆ ಮಾಡಿದ್ದ ಬಾಣಸವಾಡಿಯ ಚೆಮ್ಮನ್ನೂರು ಜ್ಯುವೆಲ್ಲರ್ಸ್ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮನೀಶ್ ವಿರುದ್ಧ ಮುಂಬೈ, ಮಂಗಳೂರು ಸೇರಿದಂತೆ ಇತರೆಡೆ ಪ್ರಕರಣಗಳು ದಾಖಲಾಗಿವೆ. ಕಾಸರಗೋಡಿನ ಬೇವಿಂಜೆಯ ಮಹಮದ್ ಎಂಬವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಐವತ್ತು ಕೋಟಿ ಮೌಲ್ಯದ ಚಿನ್ನ ಕಳಿಸಿದ್ದಾನೆ ಎಂಬ ಶಂಕೆಯಲ್ಲಿ ಆತನ ಮೇಲೆ ಗುಂಡು ಹಾರಿಸಿದ್ದ ಆರೋಪದಲ್ಲಿ ಮನೀಶ್ ಶೆಟ್ಟಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದರು.