‘ಮಾಸ್ಕ್ ಧರಿಸಿದವರಿಗೂ ಕೋವಿಡ್ ಸೋಂಕು ತಗುಲಿದೆ, ಲಾಕ್ಡೌನ್ ಅಸಾಂವಿಧಾನಿಕ’: ಡೊನಾಲ್ಡ್ ಟ್ರಂಪ್
ಮಾಸ್ಕ್ ಯಾವಾಗಲೂ ಹಾಕಿಕೊಂಡವರಿಗೇ ಕೊರೋನಾ ಸೋಂಕು ಬೇಗ ತಗಲುವುದು ಎಂದು ಅಧ್ಯಕ್ಷರು ಹೇಳಿದರು.
ರಾಜಕೀಯ ಕಾರಣಗಳಿಗಾಗಿ ಹಲವೆಡೆ ಲಾಕ್ಡೌನ್ ಅನ್ನು ಹೇರಲಾಗಿದೆ. ಲಾಕ್ಡೌನ್ ಮುಂದುವರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.
ಕರಾವಳಿ ಕರ್ನಾಟಕ ವರದಿ
ಗ್ರೀನ್ವಿಲ್ಲೆ: ಎನ್ಬಿಸಿ ನ್ಯೂಸ್ ಸಂವಾದದಲ್ಲಿ ಮಾತನಾಡಿದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಸ್ಕ್ ಧರಿಸದೇ ಇರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮಾಸ್ಕ್ ಧರಿಸಿದವರಿಗೂ ಕೋವಿಡ್ ಸೋಂಕು ತಗುಲಿದೆ. ಅಧ್ಯಕ್ಷನಾಗಿ ಶ್ವೇತಭವನದ ಸುಂದರ ಕೋಣೆಯಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ಅಪಾಯದ ಹೊರತಾಗಿಯೂ ಜನರನ್ನು ಭೇಟಿ ಮಾಡಬೇಕಿದೆ. ಮಾಸ್ಕ್ ಯಾವಾಗಲೂ ಹಾಕಿಕೊಂಡವರಿಗೇ ಕೊರೋನಾ ಸೋಂಕು ತಗಲುವುದು ಬೇಗ ಎಂದು ಅಧ್ಯಕ್ಷರು ಹೇಳಿದರು.
ಲಾಕ್ಡೌನ್ ಅಸಾಂವಿಧಾನಿಕ
ಕೊರೋನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಅಮೇರಿಕಾದಲ್ಲಿ ವಿವಿಧ ರಾಜ್ಯಗಳು ಹೇರಿರುವ ಲಾಕ್ಡೌನ್ ‘ಅಸಾಂವಿಧಾನಿಕ’ ಎಂದೂ ಟ್ರಂಪ್ ಟೀಕಿಸಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಹಲವೆಡೆ ಲಾಕ್ಡೌನ್ ಅನ್ನು ಹೇರಲಾಗಿದೆ. ಲಾಕ್ಡೌನ್ ಮುಂದುವರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಲಾಕ್ಡೌನ್ ಹೇರಿಕೆಯನ್ನು ವಿರೋಧಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಮೊದಲಿನಿಂದಲೂ ಮಾಸ್ಕ್ ಧರಿಸುವುದನ್ನು ಇಷ್ಟಪಡುತ್ತಿರಲಿಲ್ಲ. ಇತ್ತೀಚೆಗೆ ಕೋವಿಡ್ ಸೋಂಕಿತರಾಗಿ ಗುಣಮುಖರಾಗಿ ಶ್ವೇತಭವನ ಪ್ರವೇಶಿಸುತ್ತಲೇ ಮಾಸ್ಕ್ ತೆಗೆದಿದ್ದರು.
ನಾಲ್ಕು ದಿನ ಕೋವಿಡ್ ಸೋಂಕಿಗಾಗಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಡೊನಾಲ್ಡ್ ಟ್ರಂಪ್ ಕಳೆದ ಸೋಮವಾರದಿಂದ ಮತ್ತೆ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.
ಕಳೆದ ಸೆಪ್ಟೆಂಬರ್ 26ರಂದು ಶ್ವೇತಭವನದಲ್ಲಿ ನಡೆದಿದ್ದ ಬೃಹತ್ ಕಾರ್ಯಕ್ರಮದಲ್ಲಿ ಬಹುತೇಕ ಮಂದಿ ಮಾಸ್ಕ್ ಧರಿಸಿರಲಿಲ್ಲ. ಇದರಿಂದ ಅಧ್ಯಕ್ಷ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಗೆ ಕೊರೋನಾ ಸೋಂಕು ತಗಲಿರಬೇಕು ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಡೊನಾಲ್ಡ್ ಟ್ರಂಪ್ ಸ್ವಲ್ಪವೂ ಚಿಂತೆ ಮಾಡಿಕೊಂಡಿದ್ದಿಲ್ಲ.
ಕೋವಿಡ್ ಸೋಂಕಿನ ತಡೆಗೆ ಪರಿಣಾಮಕಾರಿ ಲಸಿಕೆ ಇನ್ನೂ ಜನ ಬಳಕೆಗೆ ಲಭ್ಯವಾಗದಿರುವ ಸಂದರ್ಭದಲ್ಲಿ ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೋಗ ಹರಡುವುದನ್ನು ತಡೆಯಲು ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಉತ್ತಮ ಎಂಬ ಅಭಿಪ್ರಾಯವಿದೆ.