ಮಾಗಡಿ ಯುವತಿ ಕೊಲೆ ಪ್ರಕರಣ: ಕುಟುಂಬದಿಂದಲೇ ಯುವತಿಯ ‘ಮರ್ಯಾದಾ ಹತ್ಯೆ’

ಒಕ್ಕಲಿಗ ಯುವತಿ ಪರಿಶಿಷ್ಠ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಕೊಲೆಗೈಯಲಾಗಿದೆ.

ಪ್ರಿಯಕರನೇ ಈ ಹತ್ಯೆ ಮಾಡಿದ್ದಾನೆ ಎಂದು ಬಿಂಬಿಸುವ ಯತ್ನ ನಡೆಸಿದ್ದ ಯುವತಿಯ ಪೋಷಕರು ಪೊಲೀಸ್​ ದೂರು ದಾಖಲಿಸಿದ್ದರು.

ಕರಾವಳಿ ಕರ್ನಾಟಕ ವರದಿ
ರಾಮನಗರ: ಜಿಲ್ಲೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಾಗಡಿಯ ಕುದೂರಿನಲ್ಲಿ ನಡೆದ 19 ವರ್ಷದ ಯುವತಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ತನಿಖೆಯಲ್ಲಿ ಇದು ‘ಮರ್ಯಾದಾ ಹತ್ಯೆ’ ಎಂಬುದು ಬಯಲಾಗಿದೆ. ಒಕ್ಕಲಿಗ ಯುವತಿ ಪರಿಶಿಷ್ಠ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕೆ ಕೊಲೆಗೈಯಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಅ.8ರಂದು ಯುವತಿ ಹೇಮಲತಾ ನಾಪತ್ತೆಯಾಗಿದ್ದು, ಅ.10ರಂದು ಆಕೆಯ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದರು.ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಹೇಮಲತಾ ಕಾಣೆಯಾಗಿದ್ದಾಳೆ ಎಂದು ಕೃಷ್ಣಪ್ಪ ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರುದಿನವೇ ತೋಟದಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಆಕೆಯ ಪ್ರಿಯಕರನೇ ಈ ಹತ್ಯೆ ಮಾಡಿದ್ದಾನೆ ಎಂದು ಬಿಂಬಿಸುವ ಯತ್ನ ನಡೆಸಿದ್ದ ಯುವತಿಯ ಪೋಷಕರು ಪೊಲೀಸ್​ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಸಾಮೂಹಿಕ ಅತ್ಯಾಚಾರಗೈದು ಮಾಡಲಾಗಿರುವ ಹತ್ಯೆ ಎಂದು ಬಿಂಬಿಸುವ ಯತ್ನ ನಡೆದಿತ್ತು.

ರಾಮನಗರ ಎಸ್ಪಿ ಗಿರೀಶ್ ಅವರಿಗೆ‌ ಕೋವಿಡ್‌ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ಯುವತಿ ಕೊಲೆ ಪ್ರಕರಣದ ತನಿಖೆಗೆ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ ಮಾರ್ಗದರ್ಶನ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‌ಪಿ ರವಿ ಡಿ. ಚೆನ್ನಣ್ಣನವರ್‌ಗೆ ಸರಕಾರ ಸೂಚಿಸಿತ್ತು.

ಈ ಪ್ರಕರಣವನ್ನು ಎಸ್‌ಪಿ ರವಿ ಡಿ. ಚೆನ್ನಣ್ಣನವರ್‌ ಮಾರ್ಗದರ್ಶನದಲ್ಲಿ ಪೊಲೀಸರು ಗಂಭೀರ ತನಿಖೆ ನಡೆಸಿದ ವೇಳೆ ಯುವತಿಯನ್ನು ಆಕೆಯ ಪೋಷಕರೇ ’ಮರ್ಯಾದಾ ಹತ್ಯೆ’ ಮಾಡಿರುವ ಸತ್ಯಸಂಗತಿ ಬಯಲಾಗಿದೆ. ಪರಿಶಿಷ್ಟ ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ಮಗಳನ್ನೇ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಯುವತಿಯ ತಂದೆ ಮತ್ತು ದೊಡ್ಡಪ್ಪನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಬೆಟ್ಟದಹಳ್ಳಿ ನಿವಾಸಿ ಕೃಷ್ಣಪ್ಪ (48) ಹಾಗೂ ಸಹೋದರ ಸಹೋದರ ಸಂಬಂಧಿ ಯೋಗೇಶ್ ಆಲಿಯಾಸ್ ಚೇತನ್(19) ಬಂಧಿತರು. ತೋಟದಲ್ಲಿ ಯೋಗೇಶ್ ಹೇಮಲತಾಗೆ ಹಲ್ಲೆಗೈದಿದ್ದು, ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ತೀವೃ ಗಾಯಗೊಂಡ ಹೇಮಲತಾ ಸ್ಥಳದಲ್ಲೇ ಬಿದ್ದು ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಸಿನ ಓರ್ವ ಬಾಲಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಇನ್ನೂ ಕೆಲವು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.

ಈ ಹಿಂದೆ ಕೂಡ ಹೇಮಲತಾಗೆ ಆಕೆ ಯುವಕನನ್ನು ಪ್ರೀತಿಸುವುದರ ಬಗ್ಗೆ ಕುಟುಂಬಸ್ತರು ಎಚ್ಚರಿಕೆ ನೀಡಿದ್ದರು. ಒಮ್ಮೆ ರಾಜಿ ಪಂಚಾತಿಕೆ ಕೂಡ ನಡೆದಿತ್ತು ಎನ್ನಲಾಗಿದೆ.

ರಾಮನಗರ ಎಸ್ಪಿ ಎಸ್. ಗಿರೀಶ್, ಎ‌ಎಸ್‌ಪಿ ರಾಮರಾಜನ್ ಸುದ್ದಿಗೋಷ್ಠಿಯಲ್ಲಿದ್ದರು.

 

 

 

Get real time updates directly on you device, subscribe now.