ಕೊರೊನಾ ಪಾಸಿಟಿವ್ ನನಗೆ ಬರಲೇ ಇಲ್ಲ; ಬರುವುದೂ ಇಲ್ಲ: ಬೈಂದೂರು ಶಾಸಕ ಸುಕುಮಾರ ಶೆಟ್ಟಿ
ಕೊರೋನಾ ಹೆಸರಲ್ಲಿ ಶಾಸಕರು ಮೂರು ಲಕ್ಷ ರೂ. ಆರೋಗ್ಯ ಭತ್ಯೆ ಪಡೆದಿದ್ದಾರೆ ಎಂಬುದು ಸತ್ಯವಲ್ಲ ಎಂದು ಶೆಟ್ಟಿ ಹೇಳಿದ್ದಾರೆ.
ಕೊರೋನಾ ಎಂದು ಸುಳ್ಳು ವೈದ್ಯಕೀಯ ಭತ್ಯೆ ಪಡೆಯುವ ಜನ ನಾನಲ್ಲ. ಹಾಗೆ ಸಣ್ಣಮಟ್ಟದ ಕೆಲಸ ಮಾಡಲು ನಾನು ತಯಾರಿಲ್ಲ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಬೈಂದೂರು: ಕೊರೋನಾ ಪಾಸಿಟಿವ್ ನನಗೆ ಬರಲೇ ಇಲ್ಲ; ಅದು ನನಗೆ ಬರುವುದೂ ಇಲ್ಲ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿಯವರು ಹೇಳಿದ್ದಾರೆ. ಕೊರೋನಾ ಹೆಸರಲ್ಲಿ ಶಾಸಕರು ಮೂರು ಲಕ್ಷ ರೂ. ಆರೋಗ್ಯ ಭತ್ಯೆ ಪಡೆದಿದ್ದಾರೆ ಎಂಬುದು ಸತ್ಯವಲ್ಲ ಎಂದು ಅವರು ಹೇಳಿದ್ದಾರೆ. ಎರಡೂ ಕಣ್ಣುಗಳ ಶಸ್ತ್ರಚಿಕಿತ್ಸೆಯನ್ನು ಫೆ.14,15ರಂದು ಮಾಡಿದ್ದು, 17ನೇ ತಾರೀಕಿಗೆ ಬಿಲ್ ಅನ್ನು ಸ್ಲೀಕರ್ಗೆ ನೀಡಿದ್ದೇನೆ. ಶಾಸಕರ ಹಕ್ಕಿನಂತೆ ಕಣ್ಣಿನ ಚಿಕಿತ್ಸೆಗೆ ಬಿಲ್ ಅನ್ನು ನೀಡಿದ್ದೇನೆ ಹೊರತು ಕೊರೋನಾ ಹೆಸರಲ್ಲಿ ಅಲ್ಲ ಎಂದು ಸುಕುಮಾರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಕೊರೋನಾ ಚಿಕಿತ್ಸೆಗೆ ಒಳಗಾಗದೇ ವೈದ್ಯಕೀಯ ಭತ್ಯೆ ಪಡೆದಿದ್ದರೆ ತನಿಖೆ ನಡೆಯಬೇಕು
ರಾಜ್ಯದ ಸುದ್ದಿವಾಹಿನಿಯೊಂದರಲ್ಲಿ ಬಿತ್ತರವಾದ ಸುದ್ದಿ ಬಗ್ಗೆ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿಯವರು ಶಾಸಕರು ಸತ್ಯ ಹೇಳಬೇಕು ಎಂದು ಮಾಧ್ಯಮಗಳ ಮೂಲಕ ಆಗ್ರಹಿಸಿದ್ದರು. ಸುಕುಮಾರ ಶೆಟ್ಟಿಯವರು ಕೊರೋನಾ ಸೋಂಕಿತರಾದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿದ್ದರು.
ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ನಾವು ಬಿಳಿ ಹಾಳೆಯಂತಿರಬೇಕು.
ಗೋಪಾಲ ಪೂಜಾರಿಯವರು ತಾನು ಕೊರೋನಾ ಸೋಂಕಿತನಾಗಿದ್ದು, ಹೋಂ ಕ್ವಾರಂಟೈನ್ನಲ್ಲಿ ಇದ್ದೆ. ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರ ಸಲಹೆ-ಚಿಕಿತ್ಸೆಯಿಂದ ಗುಣಮುಖನಾಗಿದ್ದೇನೆ. ಶಾಸಕ ಸುಕುಮಾರ ಶೆಟ್ಟಿಯವರಿಗೆ ಕೊರೋನಾ ಸೋಂಕು ತಗುಲಿದ್ದರೆ ಯಾವ ಆಸ್ಪತ್ರೆಯಲ್ಲಿ ದಾಖಲಾಗಿದ್ದೀರಿ? ಎಲ್ಲಿ ನಿಮಗೆ ಬಿಲ್ ನೀಡಿದ್ದರು? ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ನಾವು ಬಿಳಿ ಹಾಳೆಯಂತಿರಬೇಕು. ಕೊರೋನಾ ಚಿಕಿತ್ಸೆಗೆ ಒಳಗಾಗದೇ ಸುಕುಮಾರ ಶೆಟ್ಟಿಯವರು ವೈದ್ಯಕೀಯ ಭತ್ಯೆ ಪಡೆದಿದ್ದರೆ ಅದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಪೂಜಾರಿ ಆಗ್ರಹಿಸಿದ್ದರು.
ಕೊರೋನಾ ಎಂದು ಸುಳ್ಳು ವೈದ್ಯಕೀಯ ಭತ್ಯೆ ಪಡೆಯುವ ಜನ ನಾನಲ್ಲ. ಹಾಗೆ ಸಣ್ಣಮಟ್ಟದ ಕೆಲಸ ಮಾಡಲು ನಾನು ತಯಾರಿಲ್ಲ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ.