‘ಯುವಜನತೆ ಭೂಸುಧಾರಣಾ ಕಾಯ್ದೆಯಿಂದ ದೊರೆತ ಲಾಭ ಮರೆತಿದೆ’: ಮಾಜಿ ಸಚಿವ ಸೊರಕೆ ಕಳವಳ

ಉದ್ಯಾವರದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರ ಉತ್ತರ ವಲಯದ ಕಿಸಾನ್ ಘಟಕದ ಬ್ಲಾಕ್ ಮಟ್ಟದ ಪದಾಧಿಕಾರಿಗಳ ಸಭೆ.

ಕಾಲೇಜಿನ ವ್ಯಾಸಂಗ ಮಾಡುವಾಗ ನೇಗಿಲನ್ನು ಹಿಡಿದು ಗದ್ದೆಗಳನ್ನು ಉತ್ತ ಅನುಭವ ಇದೆ. ಅನನಾಸು ಕೃಷಿಯನ್ನು ಕೂಡ ಮಾಡಿದ್ದೆ. ಜಿಲ್ಲೆಯ ಹಲವರಿಗೆ ಕೃಷಿ ಭೂಮಿಯನ್ನು ಒದಗಿಸುವಲ್ಲಿ ಹೋರಾಟ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಇಂದಿನ ಯುವಜನತೆ ಭೂಸುಧಾರಣಾ ಕಾಯ್ದೆಯಿಂದ ದೊರೆತ ಲಾಭವನ್ನು ಮರೆತ ಬಗ್ಗೆ ಮಾಜಿ ಸಚಿವ ವಿನಯ ಕುಮಾರ ಸೊರಕೆಯವರು ತೀವೃ ಬೇಸರ ವ್ಯಕ್ತ ಪಡಿಸಿದ್ದಾರೆ. ಉದ್ಯಾವರದಲ್ಲಿ ಕಾಪು ವಿಧಾನಸಭಾ ಕ್ಷೇತ್ರ ಉತ್ತರ ವಲಯದ ಕಿಸಾನ್ ಘಟಕದ ಬ್ಲಾಕ್ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಸೊರಕೆಯವರು ನೆನಪಿನಂಗಳವನ್ನು ತೆರೆದಿಟ್ಟರು.

ಭೂನ್ಯಾಯ ಮಂಡಳಿಯ ಸದಸ್ಯನಾಗಿ ಆಯ್ಕೆ ಮಾಡಿದ ಮಲ್ಲಿಕಾರ್ಜುನ ಖರ್ಗೆಯವರನ್ನು ನೆನಪಿಸಿಕೊಂಡ ಸೊರಕೆ ಜಿಲ್ಲೆಯ ಹಲವರಿಗೆ ಕೃಷಿ ಭೂಮಿಯನ್ನು ಒದಗಿಸುವಲ್ಲಿ ಹೋರಾಡಿದ ಬಗ್ಗೆ ತಿಳಿಸಿದರು.

ನಾನು ಕೂಡ ರೈತ ಕುಟುಂಬದಿಂದ ಬಂದವನು. ಕಾಲೇಜಿನ ವ್ಯಾಸಂಗ ಮಾಡುವಾಗ ನೇಗಿಲನ್ನು ಹಿಡಿದು ಗದ್ದೆಗಳನ್ನು ಉತ್ತ ಅನುಭವ ಇದೆ. ಅನನಾಸು ಕೃಷಿಯನ್ನು ಕೂಡ ಮಾಡಿದ್ದೆ ಎಂದು ತನ್ನ ಯೌವನದ ದಿನಗಳಲ್ಲಿ ಕೃಷಿಕನಾಗಿದ್ದ ತನ್ನ ಅನುಭವವನ್ನು ಸೊರಕೆ ಹಂಚಿಕೊಂಡರು.

ಉಡುಪಿ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷರಾದ ಎಲ್ಲೂರು ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಆರಂಭ ಹಾಗೂ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಮಾಡಿದ ಹೋರಾಟದ ಬಗ್ಗೆ ತಿಳಿಸಿದರು.ಮುಂದೆ ಬರುವ ಪಂಚಾಯತ್ ಚುನಾವಣೆ ಬಗ್ಗೆ ಯಾವ ರೀತಿ ಮುಂದುವರಿಯಬೇಕು ಹಾಗೂ ಯಾವ ರೀತಿ ರೂಪುರೇಷೆಗಳನ್ನು ತಯಾರು ಮಾಡಬೇಕು ಎಂಬುದರ ಬಗ್ಗೆ ಕೆಪಿಸಿಸಿ ನೀಡಿದ ಮಾಹಿತಿಯ ವಿವರಣೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಗತಿಪರ ಕೃಷಿಕ ಹಾಗೂ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಅಲಂಕರಿಸಿದ ರಾಘವೇಂದ್ರ ನಾಯ್ಕ ತಮ್ಮ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಬಗ್ಗೆ ಹಾಗೂ ಸರಕಾರದ ಇಲಾಖೆಗಳಲ್ಲಿ ಕೃಷಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು.

ಕಾಂಗ್ರೆಸ್ ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್ ಅವರು ಕಿಸಾನ್ ಘಟಕದ ಸಂಘಟನೆಯನ್ನುಇನ್ನಷ್ಟು ಬಲ ಪಡಿಸಬೇಕೆಂದು ಕಿಸಾನ್ ಘಟಕದ ಪದಾಧಿಕಾರಿಗಳನ್ನು ವಿನಂತಿಸಿಕೊಂಡರು.ಈಗಾಗಲೇ ಸುಗ್ರೀವಾಜ್ಞೆಯನ್ನೇ ದುರುಪಯೋಗಿಸಿಕೊಂಡು ಹೊಸ ಕೃಷಿ ಮಸೂದೆಗಳ ಒತ್ತಡಪೂರ್ವಕ ಹೇರಿಕೆಯ ಬಗ್ಗೆ ಅವರು ಈ ಸಂದರ್ಭ ಎಚ್ಚರಿಸಿದರು.

ಸಭೆಯಲ್ಲಿ ಉದ್ಯಾವರ ಗ್ರಾಮದ ಕೃಷಿಕರಾದ ವಿಜಯಕುಮಾರ್ ಹಾಗೂ ರಿಚ್ಚರ್ಡ್ ಫೆರ್ನಾಂಡಿಸ್ ಇವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಿಸಾನ್ ಘಟಕದ ಕಾರ್ಯದರ್ಶಿ ಉದಯ ಹೇರೂರು ಹಾಗೂ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಿಸಾನ್ ಘಟಕದಅಧ್ಯಕ್ಷರಾದ ಸುಂದರ್ ಪೂಜಾರಿ ಅವರು ವಹಿಸಿದ್ದರು. ಉದ್ಯಾವರ ಕಿಸಾನ್ ಘಟಕ ಹಾಗೂ ಉಡುಪಿ ಜಿಲ್ಲಾ ಕಿಸಾನ್ ಘಟಕದ ಉಪಾಧ್ಯಕ್ಷರಾದ ಶೇಖರ ಕೋಟ್ಯಾನ್ ಸ್ವಾಗತಿಸಿದರು.

ಕಿಸಾನ್ ಘಟಕದ ರಾಜ್ಯ ಕಾರ್ಯದರ್ಶಿ ರೋಯ್ಸ್ ಫೆರ್ನಾಂಡಿಸ್ ಧನ್ಯವಾದವಿತ್ತರು. ಕಾಪು ವಿಧಾನಸಭಾ ಕ್ಷೇತ್ರದ ಉತ್ತರ ವಲಯದ ಕಿಸಾನ್ ಘಟಕದ ಹೊಸ ಕಾರ್ಯದರ್ಶಿಯಾಗಿ ನಿಯುಕ್ತರಾದ ಸತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Get real time updates directly on you device, subscribe now.